UN NETWORKS
ಪಾವೂರು: ಚೂಂತಾರು ಪ್ರತಿಷ್ಠಾನದಿಂದ ಪಾವೂರು ಪ್ರೌಢಶಾಲೆ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ
ಸಮಯ ಸಿಕ್ಕಾಗ ದಿನ ಕನಿಷ್ಟ ಅರ್ಧ ಗಂಟೆಯಾದರೂ ಪುಸ್ತಕ ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿರಬೇಕು, ಇಂತಹ ಉತ್ಸಾಹ ಇದ್ದಲ್ಲಿ ಅಗತ್ಯ ಪರಿಕರಗಳನ್ನು ಪ್ರತಿಷ್ಠಾನದಿಂದ ನೀಡಲು ಸಿದ್ಧ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಮುರಳೀ ಮೋಹನ್ ಚೂಂತಾರು ಹೇಳಿದರು.
ಪಾವೂರು ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಪುಸ್ತಕಗಳನ್ನು ಕೊಡುಡೆಯಾಗಿ ನೀಡಿ ಅವರು ಮಾತನಾಡಿದರು. ಧಾರ್ಮಿಕ ಕೇಂದ್ರಗಳಲ್ಲಿ ಆಯಾ ಧರ್ಮದವರು ಮಾತ್ರ ಹೋಗುತ್ತಾರೆ, ಆದರೆ ವಿದ್ಯಾ ದೇಗುಲಕ್ಕೆ ಎಲ್ಲಾ ಧರ್ಮದವರೂ ಹೋಗುವುದರಿಂದ ನಿಜಾರ್ಥದಲ್ಲಿ ಶಾಲೆಗಳೇ ನೈಜ ದೇಗುಲಗಳಾಗಿವೆ, ಅದರಲ್ಲೂ ಸರ್ಕಾರಿ ಶಾಲೆಗಳು ಸಮನ್ವಯ ತಾಣಗಳಾಗಿವೆ. ಪಾಠ, ಆಟದ ಜೊತೆ ಪುಸ್ತಕಗಳನ್ನೂ ಓದುವುದರಿಂದ ಜೀವನ ಮೌಲ್ಯ ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಶಿಕ್ಷಕಿ ಆಶಾ ವೀರಾವಾಸ್ ಮಾತನಾಡಿ, ಆಧುನಿಕತೆ ಎಷ್ಟೇ ಬೆಳೆದರೂ ಪುಸ್ತಕ ಓದುವ ಚಟವಿದ್ದವರಿಗೆ ಅದರ ಮೇಲಿನ ವ್ಯಾಮೋಹ ಕಡಿಯಾಗದು, ಸಮಾಜದಲ್ಲಿನ ಮೌಲ್ಯಗಳನ್ನು ಅರಿಯಲು ಪುಸ್ತಕಗಳನ್ನು ಓದುವುದು ಮುಖ್ಯ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕರುಣಾ ಎಸ್, ಜಮೀಲಾ ಬಾನು, ಪ್ರಮೀಳಾ, ಸಂಗೀತಾ ಮಹಾಲೆ,ಶೋಭಾ ಎನ್ ಮೊದಲಾದವರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
`ಶಾಲೆಗೆ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ನಿಟ್ಟಿನಲ್ಲಿ ಹಲವು ಶಿಕ್ಷಣ ಪ್ರೇಮಿಗಳಿಗೆ ಸಂದೇಶ ಕಳುಹಿಸಲಾಗಿದ್ದು, ತಕ್ಷಣದ ಪ್ರತಿಕ್ರಿಯೆ ಸಿಕ್ಕಿದೆ, ಚೂಂತಾರು ಪ್ರತಿಷ್ಠಾದಿಂದ ಪುಸ್ತಕಗಳೂ ಕೊಡುಗೆ ರೂಪದಲ್ಲಿ ಬಂದಿವೆ, ಜ.20ರಂದು ಗ್ರಂಥಾಲಯ ಸಹಿತ ನಾಲ್ಕು ಕೊಠಡಿಗಳು ಉದ್ಘಾಟನೆಯಾಗಲಿದೆ’
ಡಾ.ಪ್ರಶಾಂತ್ ಕುಮಾರ್ ಕೆ.ಎಸ್, ಮುಖ್ಯ ಶಿಕ್ಷಕ


