UN NETWORKS
ಸೋಮೇಶ್ವರ: ಗ್ರಾಮದಲ್ಲಿ ಆಧಾರ್ ಕಾರ್ಡು ಮಾಡುವ ಕೇಂದ್ರವಿಲ್ಲದೇ ಜನರು ಆಧಾರ್ ಮತ್ತು ರೇಷನ್ ಕಾರ್ಡುಗಳಿಗಾಗಿ ಪರಾದಾಡುವಂತಾಗಿದೆ. ಬೇರೆ ಗ್ರಾಮದಲ್ಲಿರುವ ಆಧಾರ್ ಕೇಂದ್ರಗಳಲ್ಲಿ ರೂ.500 ಪಡೆಯುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈ ಕುರಿತು ಹಣ ಪಡೆದು ಆಧಾರ್ ನೋಂದಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರುಸಭಾಭವನದಲ್ಲಿ ಗುರುವಾರ ನಡೆದ ಸೋಮೇಶ್ವರ ಗ್ರಾಮ ಪಂಚಾಯತ್ ಇದರ 2017-18ನೇ ಸಾಲಿನ 1ನೇ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿದ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಸಮಸ್ಯೆಯ ಬಗ್ಗೆ ಈಗಾಗಲೇ ಮನಗಂಡು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಪಿಲಾರು ಸಮೀಪ ನೀರು ಹೋಗುವ ದಾರಿಯಲ್ಲಿ ಮನೆ ನಿರ್ಮಿಸಿದ್ದು, ಇದರ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ. . ರಸ್ತೆ ಬದಿಗಳಲ್ಲಿ ನೀರು ಇಕ್ಕಟ್ಟಾಗುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ನಡೆಯುತ್ತಿಲ್ಲ ಎಂಬ ಸಮಸ್ಯೆಗೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಘನತ್ಯಾಜ್ಯ ಘಟಕಕ್ಕೆ ಜಾಗವನ್ನು ಗುರುತಿಸಲಾಗಿದೆ ಆದರೆ ಕೆಲವು ಅಡೆತಡೆಗಳಿಂದ ಅದು ಅಸಾಧ್ಯವಾಗಿದೆ. ಶೀಘ್ರವೇ ಎಲ್ಲರ ಒಮ್ಮತ ಪಡೆದ ನಂತರ ಘಟಕ ಸ್ಥಾಪಿಸಲಾಗುವುದು. ಕಾಟುಂಗರಗುಡ್ಡೆ ಬಳಿ ನೀರಿನ ಸಮಸ್ಯೆ ಬಹಳಷ್ಟಿದ್ದು, ಬೋರ್ ನಿರ್ಮಿಸಿದ್ದರೂ ನೀರು ಸಿಕ್ಕಿಲ್ಲ. ಉಪ್ಪು ನೀರಿನ ತೊಂದರೆಯಿಂದಾಗಿ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಆ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.
ಪೊಲೀಸರಿಗೆ ಅಪರಾಧ ಕೃತ್ಯದ ಕುರಿತು ಮಾಹಿತಿ ನೀಡಿದರೂ , ಠಾಣೆಗೆ ಬಂದು ತಿಳಿಸುವಂತೆ ಹೇಳುತ್ತಾರೆ. ಇದರಿಂದ ಅಪರಾಧಿಗಳು ಪೊಲೀಸರಿಂದ ತಪ್ಪಿಸುವಂತಹ ಸ್ಥಿತಿಯಿದೆ. ಪೊಲೀಸರು ವಿಳಂಬ ನೀತಿ ಅನುಸರಿಸದೆ ನಾಗರಿಕರು ಫೋನಾಯಿಸಿದಾಗ ಶೀಘ್ರವೇ ಸ್ಪಂಧಿಸಬೇಕಿದೆ. ಅಡ್ಕ ಪರಿಸರದಲ್ಲಿ ಅಪರಿಚಿತ ವ್ಯಕ್ತಿಗಳು, ಕಾರು, ಬೈಕುಗಳಲ್ಲಿ ಹೋಗುತ್ತಿರುವುದರಿಂದ ದೇವಸ್ಥಾನಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಬೀರಿ ಜಂಕ್ಷನ್ನಿನಲ್ಲಿ ವಾಹನ ದಟ್ಟಣೆಯೂ ಹೆಚ್ಚಿದ್ದು, ಅಲ್ಲಿ ಪೊಲೀಸರನ್ನು ನಿಯೋಜಿಸಬೇಕಿದೆ. ಹಟ್ಟಿಯಿಂದಲೇ ಜಾನುವಾರುಗಳನ್ನು ಕಳವುಗೈಯ್ಯುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ. ಕಳ್ಳರನ್ನು ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿಲ್ಲ. ಸಾಲ ಪಡೆದು ಜಾನುವಾರು ಸಾಕುವವರಿಗೆ ಇಂತಹ ಘಟನೆಗಳು ಮರುಕಳಿಸುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಎಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂತು.
ನೋಡೆಲ್ ಅಧಿಕಾರಿಯಾಗಿ ಶೀಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಶ್ಯಾಮಲಾ, ಉಪಾಧ್ಯಕ್ಷೆ ಸುಶೀಲಾ ಎಸ್ ನಾಯಕ್, ತಾ.ಪಂ ರವಿಶಂಕರ್, ರಾಮಚಂದ್ರ ಕುಂಪಲ, ಅಭಿವೃದ್ಧಿ ಅಧಿಕಾರಿ ಮನೋಹರ್ .ಎನ್ ಗೌಡ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ರೂಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸೋಮೇಶ್ವರ ವ್ಯಾಪ್ತಿಯಲ್ಲಿ ತಲೆದೋರಿರುವ ತ್ಯಾಜ್ಯ ಸಮಸ್ಯೆ ನಿರ್ಮೂಲನೆಗೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮತ್ತು ತ್ಯಾಜ್ಯ ವಿಲೇವಾರಿಗೆ ಜಿ.ಪಂ ಮುಂದಾಗಿದ್ದು, ಸಾರ್ವಜನಿಕರ ಒಮ್ಮತದಿಂದ ತೋರಿಸುವ ಸ್ಥಳದಲ್ಲಿ ಘಟಕ ನಿರ್ಮಿಸಲಾಗುವುದು.
ಧನಲಕ್ಷ್ಮೀ ಗಟ್ಟಿ
ಜಿಲ್ಲಾ ಪಂಚಾಯಿತಿ ಸದಸ್ಯೆ












