ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಮೊಗವೀರಪಟ್ನ,ಕೈಕೋ, ಸುಭಾಷನಗರ , ಸೋಮೇಶ್ವರ, ಉಚ್ಚಿಲ ಭಾಗದಲ್ಲಿರುವ ಸುಮಾರು 50 ಮನೆಗಳಿಗೆ ಅಲೆಗಳು ಬಡಿಯಲು ಆರಂಭಿಸಿದೆ.
ಕೆಲ ದಿನಗಳಿಂದ ಶಾಂತಗೊಂಡಿದ್ದ ಸಮುದ್ರ ತೀರ ಕಳೆದೆರಡು ದಿನಗಳಿಂದ ಬೀಸಿದ ಗಾಳಿಯಿಂದಾಗಿ ಅಬ್ಬರ ಹೆಚ್ಚಾಗಿದೆ. ಪರಿಣಾಮ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದೆ. ಸುಭಾಷನಗರ ಮತ್ತು ಕೈಕೋ ಭಾಗದಲ್ಲಿನ ಜನ ಸ್ಥಳಾಂತರಗೊಂಡು ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಮೊಗವೀರಪಟ್ನ ಸಮೀಪ ಶಾಶ್ವತ ತಡೆಗೋಡೆ ಕಾಮಗಾರಿ ಭಾಗಶ: ಪೂರ್ಣಗೊಂಡಿದ್ದರೂ ಅಲೆಗಳು ಕಡಿಮೆಯಾಗದಿರುವುದು ಸ್ಥಳೀಯರಲ್ಲಿ ಕುತೂಹಲ ಕೆರಳಿಸಿದೆ.
ಭಾಗಶ: ಮುಳುಗಡೆಯಾಗಿ ಕಲ್ಲುಗಳೆಡೆಯಲ್ಲಿ ಸಿಲುಕಿರುವ ಬಾರ್ಜ್ನ ಕ್ರೇನ್ ಹೊರತುಪಡಿಸಿ , ಉಳಿದ ಭಾಗಗಳಿಂದ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ.
ಸ್ಥಳಕ್ಕೆ ಸಚಿವರ ಭೇಟಿ: ಕಡಲ್ಕೊರೆತ ಬಾಧಿತ ಪ್ರದೇಶಗಳಿಗೆ ಸಚಿವ ಖಾದರ್ ತಮ್ಮ ಮೂರನೇ ಭೇಟಿಯನ್ನು ಸೋಮವಾರ ನಡೆಸಿದರು. ಈ ವೇಳೆ ಮೊಗವೀರಪಟ್ನದಿಂದ ಉಚ್ಚಿಲವರೆಗೂ ಅಲೆಗಳು ಹೆಚ್ಚಿರುವ ಪ್ರದೇಶಕ್ಕೆ ಶೀಘ್ರವೇ ಕಲ್ಲುಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ನಗರಸಭೆ ವತಿಯಿಂದ ನಡೆಸಲಾಗುವುದು ಎಂದರು.




