ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಸಮಸ್ತ ಹಿಂದು ಬಾಂಧವರು ನಂಬಿಕೊಂಡು ಬಂದಿರುವ ಶ್ರೀ ಕ್ಷೇತ್ರ ಕಟೀಲಿನ ದೇವಿ ಹಾಗೂ ಹಿಂದೂ ದೇವರಿಗೆ ಅವಹೇಳನಕಾರಿಯಾಗಿ ಬರೆದಿರುವುದು ಆಘಾತವನ್ನು ಉಂಟುಮಾಡಿದೆ. ಇದು ಧರ್ಮಗಳ ನಡುವೆ ಕಲಹಕ್ಕೆ ನಡೆಸಿರುವ ಷಡ್ಯಂತ್ರವಾಗಿದೆ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಹೇಳಿದ್ದಾರೆ.
ಅವರು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಜಬ್ಬಾರ್ ಬಿ.ಸಿ.ರೋಡು ಎಂಬಾತ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಬರೆದಿರುವುದನ್ನು ಖಂಡಿಸಿ ಉಳ್ಳಾಲ ಭಾಗದ ಹಿಂದೂ ಬಾಂಧವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ ನಡೆಸಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಪೂಜೆ ಸಲ್ಲಿಸಿ ತಪ್ಪಿತಸ್ಥನಿಗೆ ತಪ್ಪಿನ ಅರಿವಾಗುವಂತೆ ಪ್ರಾರ್ಥಿಸಿದರು.
ತಾಯಿಗೆ ಅಶ್ಲೀಲ ಶಬ್ದಗಳಿಂದ ಬೈಯ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿರುವುದು ತೀರಾ ಖಂಡನಾರ್ಹ. ಇಂತಹ ಮತಾಂಧ ಯುವಕರಿಗೆ ತಪ್ಪಿನ ಅರಿವಾಗುವಂತೆ ಅವರ ಧರ್ಮದ ಬಾಂಧವರೇ ಒಳ್ಳೆಯ ನುಡಿಗಳನ್ನು ಹೇಳಬೇಕು. ಅಂತಹ ಯುವಕರ ಮನಸ್ಸಿನಲ್ಲಿರುವ ದುಗುಡನ್ನು ದೂರವಾಗಿಸಿ ಹಿರಿಯರ ಮಾತಿನಂತೆ ನಡೆದುಕೊಳ್ಳುವ ಸಲುವಾಗಿ ಪ್ರಾರ್ಥನೆಯನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಚಂದ್ರಹಾಸ್ ಉಳ್ಳಾಲ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಡಾ. ಹಾಜಿ ಕೆ.ಎ. ಮುನೀರ್ ಬಾವಾ, ಮೋಹನ್ ರಾಜ್ ಕೆ.ಆರ್, ಮನೋಜ್ ಆಚಾರ್ಯ, ಸಂಜೀವ ಶೆಟ್ಟಿ ಅಂಬ್ಲಮೊಗರು,ದೇವದಾಸ್, ಅಜಿತ್ ಉಳ್ಳಾಲ್, ಸುಜಿತ್, ಭರತ್ ಹಾಗೂ ಹರಿಯಪ್ಪ ಸಾಲಿಯಾನ್ ಉಪಸ್ಥಿತರಿದ್ದರು


