ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲದ ಯುವಕನೋರ್ವ ಬೆಂಗಳೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದ್ದು, ಮಂಗಳವಾರ ಮುಂಜಾನೆ ಮನೆಮಂದಿಗೆ ಮಾಹಿತಿ ಲಭಿಸಿದೆ.
ಅಕ್ಕರಕೆರೆ ಮಸೀದಿ ಬಳಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ನಶಾಲ್ ಇಸ್ಮಾಯಿಲ್(20)ನಿಗೂಢ ಸಾವನ್ನಪ್ಪಿದ್ದಾನೆ.
ಮಂಗಳೂರಿನ ಪಿವಿಎಸ್ನಲ್ಲಿರುವ ಸಬ್ಡೀನ್ ಸಂಸ್ಥೆಯಲ್ಲಿ ಬಿಟೆಕ್ ಪದವಿ ಮುಗಿಸಿದ್ದ ಈತ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಕಂಪೆನಿ ಒಂದಕ್ಕೆ ಸಂದರ್ಶನಕ್ಕಾಗಿ ತೆರಳಿದ್ದ. ಅಲ್ಲಿ ಇದೀಗ ನಿಗೂಢವಾಗಿ ಸಾನನ್ನಪ್ಪಿರುವ ಕುರಿತು ಬೆಂಗಳೂರಿನ ಪೊಲೀಸರಿಂದ ಸಂಬಂಧಿಕರಿಗೆ ತಿಳಿದುಬಂದಿದೆ.
ಕೊಲೆ ಶಂಕೆ:
ನಶಾಲ್ ಬೆಂಗಳೂರಿನ ಎಚ್ಏಎಲ್ ನ ಹಳೇ ವಿಮಾಣ ನಿಲ್ದಾಣದ ಸಮೀಪದ ಕಟ್ಟಡವೊಂದರಲ್ಲಿ ಗೆಳೆಯರೊಂದಿಗೆ ನೆಲೆಸಿದ್ದ. ಈತನ ಜೊತೆಗಿದ್ದ ಇಬ್ಬರು ಗೆಳೆಯರಿಗೆ ಅಲ್ಲಿಯದ್ದೇ ಆದ ಯುವಕರ ತಂಡದ ಜೊತೆಗೆ ವೈಷಮ್ಯವಿತ್ತು. ಸೋಮವಾರ ಸಂಜೆ ಇವರು ನೆಲೆಸಿದ್ದ ಕಟ್ಟಡದ ಸಮೀಪ ನಿರ್ಮಾಣ ಹಂತದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ನಶಾಲ್ ಸಹಿತ ಇಬ್ಬರು ಗೆಳೆಯರು ಕುಳಿತಿದ್ದರು. ಇದೇ ವೇಳೆ ಅಲ್ಲಿಗೆ ವೈಷಮ್ಯ ಹೊಂದಿದ ತಂಡದ ಓರ್ವ ಬಂದಿದ್ದು ನಶಾಲ್ ಜೊತೆಗಿದ್ದ ಸ್ನೇಹಿತರೊಡನೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಯುವಕ ಆತನ ತಂಡಕ್ಕೆ ಪೋನಾಯಿಸಿ ಬರಲು ತಿಳಿಸಿದ್ದಾನೆ.
ಇದರಿಂದ ಗಾಬರಿಗೊಂಡ ನಶಾಲ್ ಸಹಿತ ಇಬ್ಬು ಗೆಳೆಯರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕಟ್ಟಡದ ಪೈಪ್ ಲೈನ್ ಮುಖಾಂತರ ಕೆಳಗಿಳಿಯುವ ವೇಳೆ ಪೈಪ್ ತುಂಡಾಗಿ ನಶಾಲ್ ಸಾವನ್ನಪ್ಪಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಆದರೆ ಇದೊಂದು ಕೊಲೆಯೆಂಬ ಸಂಶಯವನ್ನು ಸಂಬಂಧಿಕರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಇಂದು ತಡರಾತ್ರಿ ಉಳ್ಳಾಲಕ್ಕೆ ತರಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ನಶಾಲ್ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾನೆ.




