ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ನಿವೇಶನ ರಹಿತರ ಸಮಸ್ಯೆ, ಕೊಳವೆ ಬಾವಿ ಸಮಸ್ಯೆ, ಕಳವು ಪ್ರಕರಣಗಳ ತಡೆಗಟ್ಟುವಿಕೆಗೆ ಕುರಿತ ಚರ್ಚೆ ಹಾಗೂ ಕ್ರಮ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ಜರಗಿದ ಸೋಮೇಶ್ವರ ಪಂಚಾಯಿತಿನ 2015-16 ನೇ ಸಾಲಿನ ಗ್ರಾಮಸಭೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹÀ ಸಹಾಯಕ ನಿರ್ದೇಶಕ ಜೆ. ಯಶೋಧರ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ನಿವೇಶನ ರಹಿತರ 3,500 ಅರ್ಜಿಗಳು ಪಂಚಾಯಿತಿನಲ್ಲಿದೆ. ಆದರೆ ಈವರೆಗೆ ಯಾವುದೇ ನಿವೇಶನ ದೊರೆತಿಲ್ಲ. ಸರಕಾರಿ ಜಾಗ ಗುರುತಿಸುವಿಕೆ ಆಗಿ ಸರ್ವೇ ಕಾರ್ಯ ನಡೆದರೂ ಫಲಾನುಭವಿಗಳಿಗೆ ದೊರೆತಿಲ್ಲ. ಹಲವು ಮನೆಗಳಿಗೆ ವಿತರಿಸುವ ನೀರಿನ ಕೊಳವೆಬಾವಿ ಸಮೀಪವೇ ಮತ್ತೊಂದು ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುಮತಿ ನೀಡಿರುವುದು ತಪ್ಪು. ಅಲ್ಲದೆ ಕೊಳವೆ ಬಾವಿ ಕುರಿತ ಮಾಹಿತಿ ದೊರೆತಿಲ್ಲ ಅನ್ನುವ ಆರೋಪ ಗ್ರಾಮಸ್ಥರೋರ್ವರಿಂದ ಕೇಳಿಬಂತು. ಕಳವು ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಉಳ್ಳಾಲ ಪೊಲೀಸರು ರಾತ್ರಿ ಹೊತ್ತಿನಲ್ಲಿ ಹೆಚ್ಚು ಗಸ್ತು ತಿರುಗುವ ಮೂಲಕ ಕಳ್ಳರ ಕರಾಮತ್ತುಗಳಿಗೆ ತಡೆಯೊಡ್ಡಬೇಕಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ಯಾರೇಜೊಂದರ ಸಮೀಪ ಯುವ ಜೋಡಿಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗುತ್ತಿರುತ್ತಾರೆ. ಈ ಹಿಂದೆ ಕಾರಿನಲ್ಲಿ ಬಂದು ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಇಂತಹ ಕೃತ್ಯದಿಂದ ಸಮಾಜದ ಶಾಂತಿ ಕದಡುವ ಸಾಧ್ಯತೆಗಳಿದ್ದು, ಪಂಚಾಯಿತಿ ಹಾಗೂ ಪೊಲೀಸರು ಜತೆಯಾಗಿ ಕಾರ್ಯ ನಿರ್ವಹಿಸುವ ಅಗತ್ಯತೆ ಇದೆ ಎಂದು ಗ್ರಾಮಸ್ಥರೋರ್ವರು ತಿಳಿಸಿದರು. ಮೀನಿನ ಲಾರಿಗಳಿಂದ ರಸ್ತೆಯಲ್ಲಿ ತೈಲ ಹರಿಸಲಾಗುತ್ತಿದ್ದು, ಇದರ ವಿರುದ್ಧ ಕ್ರಮಕ್ಕೆ ಒತ್ತಾಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಇಲಾಖೆ ಜನರನ್ನು ಪ್ರೋತ್ಸಾಹಿಸಬೇಕು ಅನ್ನುವ ಒತ್ತಾಯ ಕೇಳಿಬಂತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ, ತಾಲೂಕು ಪಂಚಾಯಿತಿ ಸದಸ್ಯರಾದ ರಾಮಚಂದ್ರ ಕುಂಪಲ, ರವಿಶಂಕರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನೋಹರ್. ಎನ್ ಗೌಡ , ಉಳ್ಳಾಲ ಠಾಣಾಧಿಕಾರಿ ಶಿವಪ್ರಕಾಶ್, ಪಶು ವೈದ್ಯಾಧಿಕಾರಿ ನಾಗರಾಜ್, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋಪಿ ಪ್ರಕಾಶ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶಾರದಾ, ಕಲ್ಪನಾ , ಸಮಾಜ ಕಲ್ಯಾಣ ಇಲಾಖೆಯ ವಿಜಯಲಕ್ಷ್ಮೀ , ಕೋಟೆಕಾರು ಮೆಸ್ಕಾಂ ಅಧಿಕಾರಿ ಪ್ರವೀಣ್ , ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ರಾಧಾಕೃಷ್ಣ , ಗ್ರಾಮಕರಣಿಕೆ ಲಾವಣ್ಯ ಉಪಸ್ಥಿತರಿದ್ದರು.
ರೂಪಾ ಆನಂದ್ ಕಾರ್ಯಕ್ರಮ ನಿರ್ವಹಿಸಿದರು.




