ಕಲ್ಲಾಪು: ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದ ಕೆಲವು ಗಂಟೆಗಳ ಮಧ್ಯೆ ಬಸ್ಸಿನಿಂದ ಇಳಿದು ಕಲ್ಲಾಪು ಪಟ್ಲದ ಮನೆಗೆ ತೆರಳುತ್ತಿದ್ದ ಬಾಳೆಹಣ್ಣು ವ್ಯಾಪಾರಿಗೆ ಎರಡು ಬೈಕುಗಳಲ್ಲಿ ಬಂದ ಐದು ಮಂದಿಯ ತಂಡ ತಲವಾರಿನಿಂದ ದಾಳಿ ನಡೆಸಿರುವ ಘಟನೆ ಮಂಗಳವಾರ ಸಂಜೆ ಕಲ್ಲಾಪು ಪಟ್ಲ ಎಂಬಲ್ಲಿ ಸಂಭವಿಸಿದೆ.
ಕಲ್ಲಾಪು ಪಟ್ಲ ನಿವಾಸಿ ಸಫ್ವಾನ್ (22) ದಾಳಿಗೆ ಒಳಗಾದವರು. ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ತಂದೆ ಜತೆಗೆ ಬಾಳೆಹಣ್ಣು ವ್ಯಾಪಾರ ನಡೆಸುತ್ತಿರುವ ಸಫ್ವಾನ್ ಮಧ್ಯಾಹ್ನ ಕೆಲಸ ಮುಗಿಸಿ ಮನೆ ಕಡೆಗೆ ಹಿಂತಿರುಗುತ್ತಿದ್ದರು. ಕಲ್ಲಾಪು ಬಳಿ ಬಸ್ಸಿನಿಂದ ಇಳಿದು ಒಳಮಾರ್ಗವಾಗಿ ನಡೆದುಕೊಂಡು ಹೋಗುವ ಸಂದರ್ಭ ಎದುರಿನಿಂದ ಎರಡು ಬೈಕುಗಳಲ್ಲಿ ಬಂದ ಐವರು ಮಂದಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷವೋ ಅಥವಾ ಪ್ರತೀಕಾರದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸೋಮವಾರ ನಸುಕಿನ ಜಾವ ಮಂಗಳೂರಿನ ಧಕ್ಕೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಇಕ್ಬಾಲ್ ನಫ್ಸಾನ್ ಎಂಬವರಿಗೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರೆ, ಅಂದೇ ತಡರಾತ್ರಿ ಕ್ಯಾಟರಿಂಗ್ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಮಂಗಳವಾರ ಸಂಜೆ ಮತ್ತೆ ಅಂತಹದ್ದೇ ಘಟನೆ ಪುನರಾವರ್ತನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗಿನ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.


