ಕಿನ್ಯಾ:ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮಗೊಂಡಿರುವ ಘಟನೆ ಕಿನ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂತ್ಯಗುತ್ತು ಎಂಬಲ್ಲಿ ನಡೆದಿದ್ದು, ಘಟನೆಯಿಂದ ರೂ.20 ಲಕ್ಷ ನಷ್ಟ ಸಂಭವಿಸಿದೆ.
ಸಾಂತ್ಯಗುತ್ತು ನಿವಾಸಿ ಕೃಷಿಕ ಕುಟುಂಬದ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ತಡರಾತ್ರಿ ಗಣೇಶ್, ಅವರ ಪತ್ನಿ ಹಾಗೂ ಮಗು, ಮನೆಗೆ ನೆಂಟರಾಗಿ ಬಂದಿದ್ದ ಅವರ ಸಹೋದರಿ ಹಾಗೂ ಅವರ ಪತಿ ಸೇರಿದಂತೆ ತಾಯಿ ಕಿನ್ಯಾ ಬೆಳರಿಂಗೆಯಲ್ಲಿ ನಡೆಯುತ್ತಿದ್ದ ಕುಟುಂಬದ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ತಡರಾತ್ರಿ ವೇಳೆ ಸ್ಫೋಟದ ಸದ್ದು ಸ್ಥಳೀಯ ಮನೆಯವರಿಗೆ ಕೇಳಿಬಂದಿತ್ತು. ಅವರು ಗಣೇಶ್ ಅವರಿಗೆ ಕರೆ ಮಾಡಿ ಸದ್ದು ಮತ್ತು ಅಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಚಾರವನ್ನು ತಿಳಿಸಿದ್ದರು. ಕೂಡಲೇ ಗಣೇಶ್ ರಿಕ್ಷಾ ಮೂಲಕ ಮನೆಗೆ ಆಗಮಿಸಿದಾಗ ಮನೆ ಸಂಪೂರ್ಣ ಬೆಂಕಿಯಿಂದ ಆವರಿಸಿತ್ತು. ಸ್ಥಳೀಯರೆಲ್ಲರೂ ಸೇರಿ ನೀರು ಹಾಯಿಸುವಷ್ಟರಲ್ಲಿ ಮನೆ ಸಂಪೂರ್ಣ ಭಸ್ಮವಾಗಿತ್ತು. ಈ ವೇಳೆ ಮನೆಯೊಳಗೆ ಇರಿಸಲಾಗಿದ್ದ ಚಿನ್ನಾಭರಣ, ನಗದು, ದಾಸ್ತಾನಿರಿಸಿದ್ದ ಅಡಿಕೆ, ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣ ಬೆಂಕಿ ತಗಲು ಸುಟ್ಟು ಕರಕಲಾಗಿವೆ. ಸಿಲಿಂಡರ್ ಸ್ಫೋಟಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಘಟನೆಯಿಂದ ರೂ. 20 ಲಕ್ಷ ನಷ್ಟ ಸಂಭವಿಸಿದೆ.
ಅಗ್ನಿ ಶಾಮಕ ಸಿಬ್ಬಂದಿ ಮಾಹಿತಿ ನೀಡಲಾಯಿತಾದರೂ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲದಿದ್ದರಿಂದ ಅವರು ಅಲ್ಲಿಗೆ ತಲುಪಲು ಅಸಾಧ್ಯವಾಯಿತು. ಸ್ಥಳಕ್ಕೆ ಕಂದಾಯ ಅಧಿಕಾರಿ, ಪಂ. ಸದಸ್ಯರು ಭೇಟಿ ನೀಡಿದ್ದಾರೆ.




