ತೊಕ್ಕೊಟ್ಟು: ಕಲಾ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆಯ ಕಲಾವಿದ, ದೇಹದಾರ್ಡ್ಯ ಪಟು, ಮಿಮಿಕ್ರಿ ಕಲಾವಿದ, ಗಾಯಕ, ಏಕಪಾತ್ರಾಭಿನಯ ಕಲಾವಿದ ಹಾಗೂ ರಂಗಭೂಮಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿರುವುದು ತೊಕ್ಕೊಟ್ಟು ಹಾಗೂ ಕರಾವಳಿ ಭಾಗದ ಕಲಾಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ.


ಹಲವಾರು ವರ್ಷಗಳಿಂದ ಕಲಾಸೇವೆಯನ್ನು ಜೀವನದ ಧ್ಯೇಯವನ್ನಾಗಿಸಿಕೊಂಡಿರುವ ಸುರೇಶ್ ಕೆ. ರಾವ್ ಅವರು ತಮ್ಮ ಅಪೂರ್ವ ಪ್ರತಿಭೆ, ಕಲೆಯ ಮೇಲಿನ ಅಪಾರ ಪ್ರೀತಿ, ಶಿಸ್ತುಬದ್ಧ ಸಾಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಮಿಮಿಕ್ರಿ ಕಲೆಯ ಮೂಲಕ ಅನೇಕ ಗಣ್ಯರ ಧ್ವನಿಗಳನ್ನು ಜೀವಂತವಾಗಿ ಮೂಡಿಸುವುದರ ಜೊತೆಗೆ, ಗಾಯನ, ಏಕಪಾತ್ರಾಭಿನಯ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ದೇಹದಾರ್ಡ್ಯ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿ ಯುವಜನತೆಗೆ ಪ್ರೇರಣೆಯಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ರಹಿಮಾನಸಾಬ್ ಎಚ್. ಕೋಳೂರು, ಖ್ಯಾತ ಸಾಹಿತಿ ಹಾಗೂ ಬರಹಗಾರ ಆರ್. ಕೆ. ಸುಬೇದಾರ, ಹಿರಿಯ ಕಲಾವಿದ ಶಿವಕುಮಾರ ಆರಾಧ್ಯ ಸೇರಿದಂತೆ ಅನೇಕ ಗಣ್ಯ ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಕಲೆಗೆ ಸಲ್ಲಿಸಿದ ಅಮೋಘ ಸೇವೆ, ನಿರಂತರ ಪರಿಶ್ರಮ, ಪ್ರತಿಭೆಯ ಅನಾವರಣ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಮೌಲ್ಯಗಳನ್ನು ಬೆಳೆಸುವ ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿದ ಸುರೇಶ್ ಕೆ. ರಾವ್ ಅವರು ತಮ್ಮ ಸಾಧನೆಯ ಹಿಂದಿರುವ ಕುಟುಂಬದವರು, ಗುರುಗಳು, ಸ್ನೇಹಿತರು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಗೌರವವು ಕೇವಲ ಸುರೇಶ್ ಕೆ. ರಾವ್ ಅವರ ವೈಯಕ್ತಿಕ ಸಾಧನೆಗೆ ಸೀಮಿತವಾಗದೆ, ಕರಾವಳಿಯ ಕಲಾ ಪರಂಪರೆಗೆ ಸಂದಿರುವ ಹೆಮ್ಮೆಯ ಗೌರವವಾಗಿದೆ. ಅವರ ಮುಂದಿನ ಕಲಾಯಾನ ಇನ್ನಷ್ಟು ಯಶಸ್ಸು, ಪ್ರಶಸ್ತಿ ಹಾಗೂ ಜನಮನ್ನಣೆಯನ್ನು ಗಳಿಸಲಿ ಎಂದು ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾರೈಸಿದ್ದಾರೆ



