ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಶವವನ್ನು ಉಳ್ಳಾಲ ಪೊಲೀಸ್ ಠಾಣೆಯೆದುರು ಇಟ್ಟು ಮೊಗವೀರ ಸಮಾಜದವರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಕೋಟೆಪುರ ಸಮೀಪ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೋಟ್ಯಾನ್ (41) ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈಯ್ಯಲಾಗಿತ್ತು. ಘಟನೆ ಖಂಡಿಸಿ ಮಂಗಳವಾರ ಮೊಗವೀರ ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿ 24 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು.
ಬುಧವಾರ ಬೆಳಿಗ್ಗೆ ಮೊಗವೀರಪಟ್ನದ ರಾಜು ಕೋಟ್ಯಾನ್ ಅವರ ಮನೆಯಿಂದ ಹೊರಟ ಶವಯಾತ್ರೆ ಸೀರೋಡ್ ಮೂಲಕ ಛೋಟಾ ಮಂಗಳೂರು ರಸ್ತೆಯಾಗಿ ಉಳ್ಳಾಲ ಜಂಕ್ಷನ್ನಿನಿಂದ ಹಾದು ಬಳಿಕ ಉಳ್ಳಾಲ ಠಾಣೆಯೆದರು ಇರಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳಾಲದಲ್ಲಿ ಮೊಗವೀರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಚೂರಿ ಇರಿತ, ಹಲ್ಲೆ, ಮನೆಗಳಿಗೆ ಹಾನಿ ನಡೆದರೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಅದೇ ಮೊಗವೀರರ ಮೇಲೆ ಆರೋಪ ಕೇಳಿಬಂದಲ್ಲಿ ಅವರ ಮನೆಗೆ ನುಗ್ಗಿ ಕೊಂಡೊಯ್ಯುವ ಪೊಲೀಸರು, ರಾಜು ಕೋಟ್ಯಾನ್ ಹತ್ಯೆ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂಬ ಆರೋಪ ಮೊಗವೀರ ಸಮಾಜದಿಂದ ಕೇಳಿಬಂತು.
50 ಲಕ್ಷ ಪರಿಹಾರಕ್ಕೆ ಒತ್ತಾಯ: ಅಮಾನುಷವಾಗಿ ಹತ್ಯೆಯಾದ ಮೀನುಗಾರ ರಾಜು ಕೋಟ್ಯಾನ್ ಅವರು ಶ್ರಮಜೀವಿ. ಅವರ ಮನೆಮಂದಿಯ ಸ್ಥಿತಿಯನ್ನು ನೋಡುವಾಗ ಕಣ್ಣಿನಲ್ಲಿ ನೀರಿನ ಬದಲು ರಕ್ತ ಬರುವಂತಹ ಸ್ಥಿತಿ ಇದೆ. ಪತ್ನಿ ಹಾಗೂ ಅವರ ಅಂಗವಿಕಲ ಸಹೋದರ ಸಹಿತ ಇಡೀ ಕುಟುಂಬದ ಜವಾಬ್ದಾರಿಯನ್ನು ರಾಜು ಕೋಟ್ಯಾನ್ ನಿರ್ವಹಿಸುತ್ತಿದ್ದರು. ಆದರೆ ಸದ್ಯ ಬಡ ಕುಟುಂಬ ದಿಕ್ಕೆಂಟಂತಾಗಿದೆ. ಸರಕಾರ ಕೂಡಲೇ ರೂ. 50 ಲಕ್ಷ ಪರಿಹಾರ ಧನ ನೀಡಬೇಕು ಎಂದು ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಹೇಳಿದರು.
ಸುಮಾರು 1,000 ಕ್ಕೂ ಅಧಿಕ ಮಂದಿ ಶವಯಾತ್ರೆಯಲ್ಲಿ ಭಾಗವಹಿಸಿ ಪೊಲೀಸರ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಸ್ಥಳದಲ್ಲಿ ನಾಲ್ಕು ಕೆಎಸ್‍ಆರ್‍ಪಿ ತುಕಡಿಗಳನ್ನು ಬಿಗಿ ಬಂದೋಬಸ್ತಿಗಾಗಿ ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಡಿಸಿಪಿ ಕೆ.ಎಂ.ಶಾಂತರಾಜು, ಎಸಿಪಿಗಳಾದ ಕಲ್ಯಾಣಿ ಶೆಟ್ಟಿ, ಉದಯ .ಎಂ.ನಾಯಕ್, ಮದನ್.ಎ.ಗಾಂವ್ಕರ್ , ಸಿಸಿಬಿ ತಂಡ , ಕೊಣಾಜೆ ಹಾಗೂ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.
ಐವರು ವಶಕ್ಕೆ:
ಪ್ರಕರಣ ಸಂಬಂಧ ನಿನ್ನೆಯೇ ಶಂಕಿತ ಯುವಕನೋರ್ವನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ, ಇಂದು ಬೆಳಿಗ್ಗೆ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಚಿವ ಖಾದರ್ ಭೇಟಿ: ರಾಜು ಕೋಟ್ಯಾನ್ ಮೃತದೇಹವನ್ನು ಇರಿಸಲಾಗಿದ್ದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜನ ಶಾಂತಿಯುತವಾಗಿ ಇರುವುದರಿಂದ ನೆಮ್ಮದಿಯ ವಾತಾವರಣ ನಿರ್ಮಿಸಿ ಪೊಲೀಸರ ತನಿಖೆಗೆ ಅಡ್ಡಿಪಡಿಸಬಾರದು ಎಂದರು.




































