ವಜ್ರ ಗುಜರನ್, ಮಾಡೂರು
ಉಳ್ಳಾಲ: ಅಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳು ಹೋಗುವುದೇ ಕಷ್ಟದಾಯಕ. ಆದರೆ ವಿಳಂಬವಾದರೂ ಕುಂದಾಪುರ -ತಲಪಾಡಿ ಹೆದ್ದಾರಿ ಅಗಲೀಕರಣ ಕಾಮಗಾರಿಯ ಕೊನೆ ಹಂತದಲ್ಲಿ ಅತಿ ಉದ್ದನೆಯ ನೂತನ ನೇತ್ರಾವತಿ ಸೇತುವೆ ಕೆಲಸ ಪೂರ್ಣಗೊಂಡು ಇದೀಗ ಸುಗಮ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ರಾತ್ರಿ ಸಮಯದಲ್ಲಿ ಹಳೇಯ ಮತ್ತು ನೂತನ ಸೇತುವೆಯುದ್ದಕ್ಕೂ ದಾರಿದೀಪಗಳು ಇಲ್ಲದೇ ಇರುವುದರಿಂದ ದುರ್ಘಟನೆಗಳು ಸಂಭವಿಸುವ ಭೀತಿಯ ವಾತಾವರಣ ವಾಹನ ಸವಾರರಲ್ಲಿ ಹಾಗೂ ಪಾದಚಾರಿಗಳಲ್ಲಿ ಮನೆ ಮಾಡಿದೆ.
ಬ್ರಿಟೀಷ್ ಕಾಲದಿಂದ ಹಳೇಯ ಸೇತುವೆ ಆರಂಭಗೊಂಡಿದೆ. ಅದರ ದಾರಿಯುದ್ಧಕ್ಕೂ ಒಂದು ಸಮಯದಲ್ಲಿ ಸೋಡಿಯಂ ದಾರಿದೀಪಗಳನ್ನು ಅಳವಡಿಸಲಾಗಿತ್ತು. ಆದರೆ ನೂತನ ಸೇತುವೆ ಶುಭಾರಂಭಗೊಂಡ ನಂತರದ ದಿನಗಳಲ್ಲಿ ಒಂದು ಕಿ.ಮೀ ಅಂತರದ ಎರಡು ಸೇತುವೆಯೂ ರಾತ್ರಿ ಸಂದರ್ಭ ಕಗ್ಗತ್ತಲಲ್ಲಿ ಮುಳುಗುತ್ತಿದೆ.
ಪಾದಚಾರಿಗಳಲ್ಲಿ ಭೀತಿ :
ಹಳೇಯ ಸೇತುವೆಯಲ್ಲಿ ಪಾದಚಾರಿಗಳಿಗೆ ಹೋಗಲು ಫುಟ್ಪಾತ್ ಇದೆ. ಅದರಲ್ಲಿ ನಸುಕಿನ ಜಾವ ಮತ್ತು ಸಂಜೆ ವೇಳೆ ವಾಕಿಂಗ್ ಮತ್ತು ಪಾದಚಾರಿಗಳು ಹೋಗುವವರಿದ್ದಾರೆ. ಆದರೆ ದಾರಿದೀಪಗಳು ಇಲ್ಲದೇ ಇರುವುದರಿಂದ ಭೀತಿಯಿಂದಲೇ ವಾಕಿಂಗ್ ಹೋಗುವವರು , ಪಾದಚಾರಿಗಳು ನಡೆದು ಮುಂದೆ ಸಾಗಬೇಕಿದೆ. ವಾಹನದಲ್ಲಿ ಆಗಂತುಕರು ಸುಲಿಗೆ ಮಾಡಿದರೂ ಕಗ್ಗತ್ತಲಲ್ಲಿ ದುಷ್ಕøತ್ಯಗಳು ಮರೆಯಾಗುವ ವಾತಾವರಣ ಇದೆ.
ವೀಕೆಂಡ್ ಪಾರ್ಟಿ ತಾಣ:
ನಗರ ಮತ್ತು ಗ್ರಾಮೀಣ ಭಾಗದ ಮಧ್ಯದಲ್ಲಿ ಇರುವ ಸೇತುವೆಯಲ್ಲಿ ಶನಿವಾರದ ದಿನ ವೀಕೆಂಡ್ ಪಾರ್ಟಿಗಳು ನಡೆಯುವುದುಂಟು. ನಗರದ ವೈದ್ಯಕೀಯ , ಪದವಿ ಕಾಲೇಜು ವಿದ್ಯಾರ್ಥಿಗಳು, ದೇರಳಕಟ್ಟೆ ಭಾಗದ ವೈದ್ಯಕೀಯ ವಿದ್ಯಾರ್ಥಿ, ವೈದ್ಯರು ಅಲ್ಲದೆ ಕೇರಳದ ಪ್ರವಾಸಿಗರು ಇಲ್ಲೇ ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ, ಚತುಶ್ಚಕ್ರ ವಾಹನಗಳನ್ನು ನಿಲ್ಲಿಸಿ ನದಿ ಕಿನಾರೆಯ ನೋಟ ಸವಿಯುತ್ತಾ ಮತ್ತು ಏರಿಸುವ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ. ದಾರಿದೀಪಗಳು ಇಲ್ಲದೇ ಇರುವುದು ಇಂತಹ ಪಾರ್ಟಿಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.
ದುರ್ಘಟನೆಗಳಿಗೆ ದಾರಿ: ಸೇತುವೆ ಮಧ್ಯದಲ್ಲಿ ಪಾರ್ಟಿ, ಪ್ರವಾಸಿಗರು ನದಿ ವೀಕ್ಷಣೆಗೆ ನಿಲ್ಲುವ ಸಂದರ್ಭ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುತ್ತಾರೆ. ಇದರಿಂದ ನೂತನ ಸೇತುವೆಯಲ್ಲಿ ಮಂಗಳೂರಿನಿಂದ ಬರುವ ವಾಹನಗಳು ಅಮಿತ ವೇಗದಿಂದ ಇದ್ದಲ್ಲಿ, ದಾರಿದೀಪಗಳಿಲ್ಲದೆ ನಿಂತಿರುವ ಕಾರುಗಳಿಗೆ ಅಪಘಾತವಾಗುವ ದುರ್ಘಟನೆಗಳು ನಡೆದಿದೆ. ಈ ಹಿಂದೆ ನಿಂತ ಟ್ಯಾಂಕರ್ ಹಿಂದೆ ಬೈಕ್ ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ್ದರೆ, ನಿಂತಿದ್ದ ಕಾರಿಗೆ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಪ್ರಸಂಗವೂ ಇಲ್ಲಿ ಜರಗಿದೆ.

ದಾರಿದೀಪದ ಜತೆಗೆ ಬೇಕಿದೆ ಸಿ.ಸಿ.ಟಿ ವಿ:
ಆತ್ಮಹತ್ಯೆ ಹಾಗೂ ಅಪರಾಧ ಕೃತ್ಯಗಳಿಗೂ ನೇತ್ರಾವತಿಯ ಎರಡು ಸೇತುವೆಗಳು ಬಳಕೆಯಾಗುತ್ತಿರುವುದು ವಿಪರ್ಯಾಸ. ಸಹಸ್ರಾರು ಸಂಖ್ಯೆ ಜನರು ಸೇತುವೆಯಿಂದ ಉಪಯೋಗ ಪಡೆದುಕೊಂಡರೆ, ಇನ್ನು ಕೆಲ ಮಂದಿ ಅದನ್ನು ದುರುಪಯೋಗ ಪಡಿಸಿರುವ ಘಟನೆಗಳು ಇವೆ. ನೊಂದ ಮನಸ್ಸುಗಳು ಸೇತುವೆಯಿಂದ ನದಿಗೆ ಹಾರಿರುವ ಪ್ರಕರಣಗಳು ನೂರಾರು ಇದೆ. ಅದೇ ರೀತಿ ಕೊಲೆ ನಡೆಸಿ ಶವಗಳನ್ನು ಎಸೆದಿರುವ ಘಟನೆಗಳು ಇನ್ನೂ ಜೀವಂತವಾಗಿದೆ. ಬೆಂಗಳೂರು ಮೂಲದ ಐ.ಟಿ. ಉದ್ಯೋಗಿ ಮಂಗಳೂರಿನ ಇಸ್ಕಾನ್ನ ಅನುಯಾಯಿಯ ಶವವನ್ನು ಸೇತುವೆಯಿಂದ ಎಸೆದಿರುವ ಪ್ರಕರಣ ಪೊಲೀಸರ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿತ್ತು. ಆದರೆ ಈವರೆಗೂ ಪ್ರಕರಣದ ಆರೋಪಿಗಳ ತನಿಖೆಯಾಗಿಲ್ಲ. ಆದರೆ ಒಂದು ಹಂತದಲ್ಲಿ ಸೇತುವೆಯ ಉದ್ದಕ್ಕೂ ದಾರಿದೀಪ ಮತ್ತು ಸಿ.ಸಿ.ಟಿವಿಯನ್ನು ಅಳವಡಿಸುತ್ತಿದ್ದಲ್ಲಿ ಆರೋಪಿಗಳ ಸುಳಿವು ಪತ್ತೆ ಮಾಡಲು ಸಹಕಾರಿಯಾಗುತಿತ್ತು.
ಜಿಲ್ಲಾಧಿಕಾರಿಗೆ ದೂರು:
ಹಲವು ಸಮಯದಿಂದ ದುರಸ್ತಿಯಲ್ಲಿರುವ ಹಳೇಯ ಸೇತುವೆಯ ದಾರಿದೀಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮತ್ತು ಸೇತುವೆಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯೊಡ್ಡುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಉಳ್ಳಾಲ ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಅವರು ಜಿಲ್ಲಾಧಿಕಾರಿ, ಮಹಾನಗರಪಾಲಿಕೆ ಮಹಾಪೌರರು, ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಬೇಡಿಕೆ:
ಹಳೇಯ ಸೇತುವೆಯಲ್ಲಿ ನಾದುರಸ್ತಿಯಲ್ಲಿರುವ ದಾರಿದೀಪಗಳ ದುರಸ್ತಿ ಶೀಘ್ರವೇ ಆಗಬೇಕಿದೆ. ಸೇತುವೆಯಲ್ಲಿ ಪೊಲೀಸರ ಔಟ್ಪೋಸ್ಟ್ ನಿರ್ಮಾಣ ಆದಲ್ಲಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬಹುದು. ನೂತನ ಸೇತುವೆಯಲ್ಲಿ ಹೊಸ ದಾರಿದೀಪಗಳನ್ನು ಅಳವಡಿಸಬೇಕಿದೆ. ರಾತ್ರಿ ವೇಳೆ ಸೇತುವೆ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಪೊಲೀಸರು ನಿಗಾ ವಹಿಸಬೇಕು. ನೂತನ ಸೇತುವೆಯಲ್ಲೂ ಸೈಕಲ್ ಪಾಥ್ ಮತ್ತು ಪಾದಚಾರಿಗಳಿಗೆ ತೆರಳುವ ಅನುಕೂಲ ಮಾಡಬೇಕು.
` ರಾ.ಹೆ.66ರ ನೇತ್ರಾವತಿ ಸೇತುವೆ ಈ ಮೊದಲು ಒಂದು ಇತ್ತು. ಈಗ ಇನ್ನೊಂದು ನಿರ್ಮಾಣ ಆಗಿದೆ. ಸೇತುವೆ ರಾ.ಹೆ.ಯಾದ ಮಂಗಳೂರು ಮತ್ತು ಕೇರಳವನ್ನು ಜೋಡಿಸುವ ರಸ್ತೆಯಾಗಿದೆ. ಹೆದ್ದಾರಿಯಲ್ಲಿ ಹಗಲು ರಾತ್ರಿ ಹಲವು ಬಸ್ಸುಗಳು , ಘನ ವಾಹನಗಗಳು ನಿತ್ಯ ಸಂಚರಿಸುತ್ತದೆ. ಸರಕು ಸಾಗಾಟದ ಕೇಂದ್ರ ಬಿಂದುವಾಗಿದೆ. ಸೇತುವೆ ಮೇಲೆ ಈ ಹಿಂದೆ ರಾತ್ರಿ ಸಮಯದಲ್ಲಿ ಸುಮಾರು ಸೋಡಿಯಂ ದಾರಿ ದೀಪಗಳು ಉರಿಯುತ್ತಿತ್ತು. ಸಾರ್ವಜನಿಕರಿಗೆ ನಿರ್ಭೀತಿಯಿಂದ ಸಂಚರಿಸಲು ಅನುಕೂಲವಾಗಿತ್ತು. ಈ ಮಧ್ಯೆ ಕೆಲ ವಾಹನಗಳು ಕೆಟ್ಟು ನಿಲ್ಲುತ್ತದೆ. ಅಲ್ಲದೆ ರಾತ್ರಿ ಹೊತ್ತು ವಾಹನಗಳಿಗೆ ತಡೆಯೊಡ್ಡಿ ಅಹಿತಕರ ಘಟನೆಗಳು ಮತ್ತು ಸುಲಿಗೆ ನಡೆದ ವದಂತಿಗಳು ಇದೆ. ಕೃತ್ಯಗಳಿಗೆ ಕತ್ತಲೆ ವಾತಾವರಣ ಪೂರಕವಾಗಿದೆ. ಒಂದು ಕಾಲದಲ್ಲಿ ಬಹಳ ಸಾರ್ವಜನಿಕ ಒತ್ತಡದಿಂದ ದಾರಿದೀಪ ಸೇತುವೆಗೆ ಒದಗಿಬಂದಿತ್ತು. ಈಗ ಹಲವು ಸಮಯಗಳಿಂದ ದಾರಿದೀಪದ ವ್ಯವಸ್ಥೆ ಹಾಳಾಗಿದೆ. ನಿತ್ಯ ಸಂಚರಿಸುವವರಿಗೆ ಅನಾನುಕೂಲವಾಗಿದೆ’ .
ಮಹಮ್ಮದ್ ಮುಕ್ಕಚ್ಚೇರಿ
ಸಾಮಾಜಿಕ ಕಾರ್ಯಕರ್ತ
ನಗರಸಭೆ ಸದಸ್ಯ
ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಸೇತುವೆಗೆ ಆಳಪಡಿಸಿದ್ದ ಸೋಡಿಯಂ ವಿದ್ಯುತ್ ಕಂಬದ ವೈಯರ್ಗಳಿಗೆ ಸಂಪೂರ್ಣ ಹಾನಿಯಾಗಿದೆ.
20 ವರ್ಷಗಳ ಹಿಂದಿನ ವಯರನ್ನು ಈವರೆಗೆ ಬದಲಾವಣೆ ನಡೆಸಿಲ್ಲ. ಈಗಾಗಲೇ ಹಳೆ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳಲ್ಲಿ ದಾರಿದೀಪದ ದುರಸ್ತಿಯನ್ನು ನಡೆಸುತ್ತೇವೆ. ಆದರೆ ಹೊಸ ಸೇತುವೆಗೆ ದಾರಿದೀಪಗಳನ್ನು ಅಳವಡಿಸುವ ಯಾವುದೇ ಯೋಜನೆಯಿಲ್ಲ .
ಯಶವಂತ ಕಾಮತ್
ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ



