ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಮುದ್ರದಲ್ಲಿ ಸ್ನಾನಕ್ಕೆಂದು ಹಾಸನ ಮೂಲದ ಆರು ಮಂದಿ ಯುವಕರ ಪೈಕಿ ನಾಲ್ವರು ಸಮುದ್ರಪಾಲಾಗಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ವೇಳೆ ನಡೆದಿದ್ದು, ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಾಪತ್ತೆಯಾದವರನ್ನು ಹಾಸನದ ಹುಣಸೀಕೆರೆ ರಸ್ತೆಯ ಮಿರ್ಜಾ ಮೊಹಲ್ಲಾ ನಿವಾಸಿಗಳಾದ ಇಕ್ಬಾಲ್ ಪಾಶಾ ಎಂಬವರ ಪುತ್ರ ಇಮ್ರಾನ್ ಪಾಶಾ(19) ಖಲಂದರ್ ಎಂಬವರ ಮಹಮ್ಮದ್ ಸಿಯಾಬ್(19), ಮಹಮ್ಮದ್ ಶಬೀರ್ ಎಂಬವರ ಪುತ್ರ ಮಹಮ್ಮದ್ ಹನೀಫ್ (20), ಮಹಮ್ಮದ್ ಫಿರೋಝ್ ಎಂಬವರ ಪುತ್ರ ಸೈಯ್ಯದ್ ಖಲೀಲ್ (19) ಗುರುತಿಸಲಾಗಿದೆ.
ಬಶೀರ್ ಅಹಮ್ಮದ್ ಎಂಬವರ ಪುತ್ರ ಸಕಲೆಂ ಸಾಹಿಲ್ ಮತ್ತು ಮಹಮ್ಮದ್ ಫಾಝಿಲ್ ಪುತ್ರ ಸಾದಿಕ್ ಪಾಶಾ ಬದುಕುಳಿದವರಾಗಿದ್ದಾರೆ.
ಹಾಸನದಿಂದ ಮೂರು ಬೈಕುಗಳಲ್ಲಿ ಉಳ್ಳಾಲ ದರ್ಗಾ ಸಂದರ್ಶನ ಮತ್ತು ಸಮುದ್ರ ವಿಹಾರಕ್ಕೆಂದು ಬಂದಿದ್ದ ಆರು ಜನರ ತಂಡ ದರ್ಗಾ ಹೋಗುವ ಮುನ್ನ ಸೋಮೇಶ್ವರ ಸಮುದ್ರ ತೀರಕ್ಕೆ ಮಧ್ಯಾಹ್ನ 1.30ರ ಹೊತ್ತಿಗೆ ಆಗಮಿಸಿದ್ದರು. 2.30ರ ಸಮಯದಲ್ಲಿ ಮೊದಲಿಗೆ ಖಲೀಲ್ ಸಮುದ್ರಕ್ಕಿಳಿದಿದ್ದ. ಈ ವೇಳೆ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ಖಲೀಲ್ ಸಮುದ್ರ ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಕಂಡ ಸ್ನೇಹಿತರು ಒಬ್ಬರೊಬ್ಬರೇ ಹಾರಿ ರಕ್ಷಣೆಗೆ ಯತ್ನಿಸಿದರೂ ಇತರ ಮೂವರು ಸಮುದ್ರದ ಅಲೆಗಳಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ದಡದ ಮೇಲೆ ಉಳಿದಿದ್ದ ಸಾಹಿಲ್ ಮತ್ತು ಸಾದಿಕ್ ಇಬ್ಬರೂ ಬಲೆ ಹಾಕಿ ಸ್ನೇಹಿತರನ್ನು ಉಳಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಸೋಮೇಶ್ವರ ಸಮುದ್ರ ತೀರದಲ್ಲಿರುವ ಜೀವರಕ್ಷಕದಳದ ಅಶೋಕ್, ಮೋಹನ್, ದಿನೇಶ್, ಪ್ರಸಾದ್, ಉಮಾನಾಥ ಸುಜಿತ್ ಸೇರಿದಂತೆ ಈಜುಗಾರರು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಸಿಪಿ ಕಲ್ಯಾಣ್ ಶೆಟ್ಟಿ ಭೇಟಿ ನೀಡಿದ್ದು, ಎಸ್.ಐ ಭಾರತಿ ಹಾಗೂ ರಾಜೇಂದ್ರ ಶೋಧ ಕಾರ್ಯದ ನೇತೃತ್ವ ವಹಿಸಿದ್ದಾರೆ. ‘
ಆರ್ಥಿಕವಾಗಿ ಹಿಂದುಳಿದವರು: ಸಮುದ್ರದಲ್ಲಿ ನಾಪತ್ತೆಯಾದವರೆಲ್ಲರೂ ಹಾಸನದ ಮಿರ್ಜಾ ಮೊಹಲ್ಲಾದ ಒಂದೇ ರಸ್ತೆಯ ನಿವಾಸಿಗಳಾಗಿದ್ದು, ನೆರೆಹೊರೆಯವರಾಗಿದ್ದಾರೆ. ಸಣ್ಣಪುಟ್ಟ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಯುವಕರೆಲ್ಲರ ಕುಟುಂಬ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಭಾನುವಾರದ ರಜೆಯಲ್ಲಿ ಬೈಕುಗಳಲ್ಲಿ ಪ್ರವಾಸ ಹೋಗುವ ಹವ್ಯಾಸವನ್ನು ಇಟ್ಟುಕೊಂಡಿದ್ದರು.
ಇಮ್ರಾನ್ ಪಾಶಾ ಹಾಸನದ ಯಮಹಾ ಷೋರೂಂ ನಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ , ಅವರ ತಂದೆ ರಿಕ್ಷಾ ಚಾಲಕನಾಗಿ ದುಡಿದು ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ. ಈತ ತಂದೆ , ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ. ಸಿಯಾಬ್ ಅವರ ತಂದೆ ಖಲಂದರ್ ರಸ್ತೆಬದಿಯಲ್ಲಿ ಕಬಾಬ್ ಮಾರುವ ಅಂಗಡಿಯನ್ನು ಹೊಂದಿದ್ದು, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಸಿಯಾಬ್ ಎರಡನೆಯವನಾಗಿದ್ದು ಹಾಸನದಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದನು. ಹನೀಫ್ ಹಾಸನದ ಬೈಪಾಸ್ ರಸ್ತೆಯಲ್ಲಿ ಕಾರು ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಮೂವರು ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ. ಸೈಯ್ಯಿದ್ ಖಲೀಲ್ ಹಾಸನದ ಆರ್‍ಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ಇತಿಹಾಸದಲ್ಲಿ ದೊಡ್ಡ ದುರಂತ: ಸೋಮೇಶ್ವರ ಸಮುದ್ರ ತೀರದಲ್ಲಿ ನಾಲ್ವರು ಸಮುದ್ರಪಾಲಾಗಿರುವುದು ಇತಿಹಾಸದಲ್ಲಿ ಮೊದಲು. ಒಬ್ಬರು ಅಥವಾ ಇಬ್ಬರು ಹಾಗೇ ಸಮುದ್ರಪಾಲಾಗುತ್ತಿದ್ದರೆ, ಇಂದು ನಡೆದ ದುರಂತ ದೊಡ್ಡದು ಎಂದು ಸ್ಥಳೀಯರು ಹೇಳಿದ್ದಾರೆ. 1985 ರಲ್ಲಿ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಿಂದ ಹೊಸವರ್ಷಾಚರಣೆ ಸಂದರ್ಭ ಮೂವರು ಏಕಕಾಲದಲ್ಲಿ ಸಮುದ್ರಪಾಲಾಗಿದ್ದರು. ಅವರ ನೆನಪಿಗಾಗಿ ಈಗಲೂ ಬಂಡೆಕಲ್ಲಿನಲ್ಲಿ ಅವರ ಹೆಸರುಗಳನ್ನು ಕೆತ್ತಿ ಬರೆಯಲಾಗಿದೆ. ಅಲ್ಲದೆ ಅಪಾಯದ ಸೂಚನೆಯನ್ನು ಹಾಕಲಾಗಿದೆ. ಆ ಬಳಿಕ ಇದೇ ಮೊದಲ ಬಾರಿಗೆ ಜತೆಯಾಗಿ ನಾಲ್ವರು ಸಮುದ್ರಪಾಲಾಗಿದ್ದಾರೆ.













