ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹರೇಕಳ: ಅಕ್ಷರ ಸಂತ ಹಾಜಬ್ಬರಿಗೆ ಹರೇಕಳದ ನ್ಯೂಪಡ್ಪುವಿನಲ್ಲಿ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್, ಮಂಗಳೂರು ಇವರು ನಿರ್ಮಿಸಿಕೊಟ್ಟ ನೂತನ ಥಾರಸಿ ಮನೆಯ ಹಸ್ತಾಂತರ ಕಾರ್ಯಕ್ರಮ ಮತ್ತು ಗೃಹಪ್ರವೇಶವು ಭಾನುವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರನ್ನು ಒಂದಲ್ಲ ಒಂದು ದಿನ ಸಮಾಜವೇ ಗುರುತಿಸುತ್ತದೆ. ಸಮಾಜಸೇವೆಯೊಂದಿಗೆ ಅವಿದ್ಯಾವಂತನಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಹರೇಕಳ ಹಾಜಬ್ಬರನ್ನು ಸಮಾಜವು ಗುರುತಿಸಿದ್ದು ಮಾತ್ರವಲ್ಲ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ನವರು ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯವಾಗಿದ್ದು ಇದೊಂದು ಪುಣ್ಯದ ಕೆಲಸ ಮತ್ತು ಮಾದರಿಯಾಗಿದೆ ಎಂದು ಹೇಳಿದರು.
ಬಡವರ ಕಣ್ಣೀರೊರೆಸುವ ಕೆಲಸ ಎಂದರೆ ದೇವರ ಕೆಲಸ. ಕಿತ್ತಲೆ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬ ಶಾಲೆಯೊಂದನ್ನು ನಿರ್ಮಿಸಲು ಹೋರಾಟ ಮಾಡಿ ಯಶಸ್ಸನು ಕಂಡಿದ್ದಾರೆ. ಹಾಜಬ್ಬರ ಶಿಕ್ಷಣ ಸಂಸ್ಥೆಯು ಹಂತ ಹಂತವಾಗಿ ಬೆಳೆದು ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಹಾಗೂ ದೇವರು ಅವರಿಗೆ ಶಕ್ತಿ ತುಂಬುವುದರೊಂದಿಗೆ ಆಯುಷ್ಯವನ್ನು ವೃದ್ಧಿಸಿ ಶಿಕ್ಷಣ ಕ್ಷೇತ್ರಕ್ಕೆ ಅವರಿಂದ ಇನ್ನಷ್ಟು ಕೊಡುಗೆ ಸಿಗುವಂತಾಗಲಿ ಎಂದು ಹಾರೈಸಿದರು.
ಹಾಜಬ್ಬರ ಮನೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹರೇಕಳ ಹಾಜಬ್ಬ ಅವರು ತನಗಾಗಿ ಏನನ್ನೂ ಮಾಡಿಲ್ಲವಾದರೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರನ್ನು ದೇವರು ಎಂದೂ ಕೈ ಬಿಡಲಾರ. ಯುನೈಟೆಡ್ ಕ್ರಿಶ್ಟಿಯನ್ ಅಸೋಸಿಯನ್ ಅವರು ಹಾಜಬ್ಬರಿಗೆ ಸೂರು ಕಟ್ಟಿಕೊಟ್ಟು ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಸಮಾಜಕ್ಕೆ ಹಾಜಬ್ಬರ ಸೇವೆ ಸುದೀರ್ಘವಾಗಿರಲಿ ಎಂದು ಹಾರೈಸಿದರು.
ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ನ ಅಧ್ಯಕ್ಷ ಅಲ್ಬನ್ ಮಿನೇಜಸ್ ಹಾಜಬ್ಬರ ಮನೆಗೆ ಈ ಮೊದಲು ಬೇಟಿ ಕೊಟ್ಟಿದ್ದಾಗ ಅವರ ಮನೆಯ ಪರಿಸ್ಥಿತಿ ಶೋಚನೀಯವಾಗಿತ್ತು. ರಾಷ್ಟ್ರಮಟ್ಟದ, ರಾಜ್ಯ ಮಟ್ಟದ ಪ್ರಶಸ್ತಿಯನ್ನು ಇಡಲು ಜಾಗವಿಲ್ಲದೆ ನೆಲದಲ್ಲೆ ಇಟ್ಟಿದ್ದರು. ಬಳಿಕ ಎಲ್ಲರ ಸಹಕಾರದಿಂದ ಹಾಜಬ್ಬರಿಗೆ ಮನೆ ಕಟ್ಟಿಸಿಕೊಡುವ ನಿರ್ಧಾರ ಮಾಡಿದ್ದೆವು. ಇವತ್ತು ಮನೆಯನ್ನು ಅವರಿಗೆ ಹಸ್ತಾಂತರ ಮಾಡಿದ್ದು ನಮಗೆಲ್ಲರಿಗೂ ಮನಸ್ಸಿಗೆ ತೃಪ್ತಿ ತಂದಿದೆ ಮತ್ತು ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಲ್ಬನ್ ಮಿನೇಜಸ್ ಹಾಗೂ ಮಾಧ್ಯಮದ ಮೂಲಕ ಹಾಜಬ್ಬರನ್ನು ಪರಿಚಯಿಸಿದ್ದ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರನ್ನು ಇದೇ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಯು.ಟಿ.ಖಾದರ್ ಸನ್ಮಾನಿಸಿದರು.
ಯು.ಟಿ.ಖದರ್ ಅವರು ನೂತನ ಮನೆಯಲ್ಲಿ ಹಾಜಬ್ಬರ ಪ್ರಶಸ್ತಿಗಳನ್ನು ಜೋಡಿಸಿಡಲಾದ ಕೊಠಡಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮೂಡಾ ಆಯುಕ್ತ ನಝೀರ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ, ಹರೇಕಳ ಪಂಚಾಯಿತಿ ಅಧ್ಯಕ್ಷ ಅನಿತಾ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು. ಅಸೋಸಿಯೇಶನ್ನ ಜೂಡ್ ನೊರೋನ್ಹಾ ಬೋಂದೆಲ್ ಕಾರ್ಯಕ್ರಮ ನಿರೂಪಿಸಿದರು.















