ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಚಿತ್ರಗಳು: ನಿತೇಶ್.ಪಿ.ಬೈಂದೂರ್
ಕೊಣಾಜೆ: ಗುರುವಾರ ಮಂಗಳಾ ಆಡಿಟೋರಿಯಂನಲ್ಲಿ 10ನಾಟಕಗಳು ಪ್ರದರ್ಶನಗೊಂಡವು. ಸಾಮಾಜಿಕ ಸಮಸ್ಯೆ ಮತ್ತು ಜಾತಿ ವರ್ಗ ಸಂಘರ್ಷದ ವಸ್ತುವನ್ನು ಬಿಂಬಿಸುವ ನಾಟಕಗಳು ವೇದಿಕೆಯಲ್ಲಿ ಕಂಡುಬಂದವು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಎಂಡೋಸಲ್ಫಾನ್ ಸಮಸ್ಯೆಯ ಬಗ್ಗೆ, ಗುಲ್ಬರ್ಗ ವಿವಿ ತಂಡ ಸಾಕ್ರಟೀಸ್ನ ಜೀವನದ ಕೊನೆಯ ಕ್ಷಣಗಳನ್ನು ಸತ್ಯಾನ್ವೇಷಣೆ ಮಾಡಿ ಬದುಕಿನ ಕರುಣಾಜನಕ ಕಥೆಯನ್ನು, ಧಾರವಾಡ ಕೃಷಿ ವಿದ್ಯಾಲಯದವರು ಮಹಾರಾಷ್ಟ ್ರದ ದಲಿತರ ಕುಟುಂಬವೊಂದರ ಸಮಸ್ಯೆಯನ್ನು ಕೇಂದ್ರೀಕರಿಸಿದ, ಧಾರವಾಡದ ಕರ್ನಾಟಕ ವಿವಿ ನೆರೆಸಂತ್ರಸ್ತರ ಜೀವನ ಕಥೆ, ಅಮೃತ ವಿದ್ಯಾಪೀಠಂ ಕೊಯಮತ್ತೂರು ಗಾಸಿಪ್ನ ನಿಜವನ್ನು ಹುಡುಕುವ ಯತ್ನ, ಮಂಗಳೂರು ವಿಶ್ವವಿದ್ಯಾಲಯದವರು ಘಟೋದ್ಗಜನ ಪುತ್ರ `ಬರ್ಬರಿಕಾ’ ಎಂಬ ವಿಶಿಷ್ಠ ಕಥಾನಕವನ್ನುಳ್ಳ ಕಿರುನಾಟಕ ಪ್ರದರ್ಶಿಸಿದರು. ಕೇರಳ ವಿವಿ ತಂಡ ಇತಿಹಾಸದ ಪಾತ್ರಗಳೊಂದಿಗೆ ಸಂವಾದಿಸುವ ಏಕಾಂಕ ನಾಟಕವೂ ಗಮನ ಸೆಳೆಯಿತು. ನಾಟಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂದಿತ್ತು.









