ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ಬೇಲಿಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಪಂಪ್ ವೆಲ್ ಸಮೀಪದ ಪಡೀಲ್ ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದ್ದು, ನುಜ್ಜುಗುಜ್ಜಾದ ಕಾರೊಳಗಡೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಅರ್ಧ ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಮಾರಿಪಳ್ಳ ನಿವಾಸಿ ಮಹಮ್ಮದ್ (25) ಗಂಭೀರ ಗಾಯಗೊಂಡವರು. ಮಂಗಳೂರಿನಿಂದ ಮಾರಿಪಳ್ಳ ಕಡೆಗೆ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಡೀಲ್ ಸಮೀಪ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಗೆ ಕಾರು ಡಿಕ್ಕಿ ಹೊಡೆದಿದೆ, ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮಹಮ್ಮದ್ ಅದರ ಒಳಗಡೆಯೇ ಸಿಲುಕಿದ್ದರು. ರಸ್ತೆಯಿಂದ ಕೆಲ ದೂರದಷ್ಟು ಕಾರು ಚಲಿಸಿದ್ದರಿಂದ ಕೆಲ ಸಮಯ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಕುಂಬಳೆಯ ಸಿಡಿಮದ್ದು ಪ್ರದರ್ಶನ ಕಾಂiÀರ್iಕ್ರಮದಲ್ಲಿ ಭಾಗವಹಿಸಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ಕಲ್ಲಡ್ಕ ನಿವಾಸಿಗಳಿಬ್ಬರು ರಸ್ತೆಬದಿಯಲ್ಲಿ ಕಾರಿನ ಹೆಡ್ ಲೈಟ್ ಉರಿಯುತ್ತಿರುವುದನ್ನು ಗಮನಿಸಿ ಹತ್ತಿರ ಬಂದಾಗ ಚಾಲಕ ನರಳಾಡುತ್ತಿರುವುದು ಕಂಡು ಬಂದಿದೆ. ಕೂಡಲೇ 108 ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೆ, ಸ್ಥಳೀಯರನ್ನು ಕರೆಸಿ ಕಾರೊಳಗಡೆ ಸಿಲುಕಿದ್ದ ಮಹಮ್ಮದ್ ಅವರನ್ನು ಹೊರಗೆಳೆದಿದ್ದಾರೆ. ಮಹಮ್ಮದ್ ಅವರ ಒಂದು ಕಾಲಿಗೆ ಗಂಭೀರ ಗಾಯವಾಗಿದೆ. ಮಧ್ಯರಾತ್ರಿ ಸಮಯವಾಗಿದ್ದರಿಂದ ಅಪಘಾತವನ್ನು ಯಾರೂ ಗಮನಿಸದೇ ಇದ್ದಲ್ಲಿ ಜೀವಕ್ಕೆ ಹಾನಿಯುಂಟಾಗುತ್ತಿತ್ತು.













