ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ದಿನವಿಡೀ ಶಾಂತವಾಗಿರೋ ಆ ಊರಲ್ಲಿ ಸಂಜೆಯಾಗುತ್ತಲೇ ಆತಂಕ ಮನೆ ಮಾಡುತ್ತೆ. ಸಂಜೆ ಆರು ಘಂಟೆ ಕಳೆದರೆ ಸಾಕು ಜನ ಮನೆಬಿಟ್ಟು ಹೊರಗೆ ಬರೋದಕ್ಕೆ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗುತ್ತೆ. ಪ್ರತೀನಿತ್ಯ ಒಂದು ಘಂಟೆಗಳ ಕಾಲ ಆ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆಯುತ್ತೆ. ಅಷ್ಟಕ್ಕೂ ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿರೋದು ಅಲ್ಲಿನ ಮನೆಗಳ ಮೇಲೆ ಬೀಳ್ತಾ ಇರೋ ಕಲ್ಲುಗಳು!
ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿ ಸಂಜೆ ಆರು ಘಂಟೆಯ ನಂತರ ಜನ ಮನೆ ಬಿಟ್ಟು ಹೊರಗಡೆ ಬರೋದಕ್ಕೆ ಭಯ ಪಡ್ತಾರೆ. ಸಮಯ ಸರಿಯಾಗಿ ಸಂಜೆ 6.30ರಿಂದ 7.30ರ ಅವಧಿಯಲ್ಲಿ ಇಲ್ಲಿನ ನಾಲ್ಕೈದು ಮನೆಗಳ ಮೇಲೆ ಕಲ್ಲುಗಳು ಬೀಳೋದಕ್ಕೆ ಆರಂಭವಾಗುತ್ತೆ. ಕೇವಲ ಒಂದು ಘಂಟೆಯ ಅವಧಿಯಲ್ಲಿ ಹತ್ತಾರು ಜಲ್ಲಿ ಕಲ್ಲುಗಳು ಮನೆಗಳ ಮಾಡಿನ ಮೇಲೆ ಬೀಳುತ್ತಿವೆ. ಹೀಗೆ ಕಳೆದ ಒಂದು ವಾರದಿಂದ ಮನೆಗಳ ಮಾಡಿನ ಮೇಲೆ, ಅಂಗಳಕ್ಕೆ ಅಳವಡಿಸಲಾಗಿರುವ ತಗಡಿನ ಶೀಟುಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಒಂದೊಂದು ದಿಕ್ಕಿನಿಂದ ಹಾರಿ ಬರೋ ಕಲ್ಲುಗಳು ಏಕಾಏಕಿ ಮನೆಗಳ ಮೇಲೆ ಬೀಳೋದು ಇದೀಗ ಕಾಟಿಪಳ್ಳದ ಜನರ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಕಲ್ಲುಗಳು ಬೀಳೋದರ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಭೂತದ ಕಾಟ ಅಂತಿದ್ರೆ, ಇನ್ನು ಕೆಲವರು ಭಾನಾಮತಿ ಅನ್ನೋ ಮೂಲಕ ಆತಂಕ ವ್ಯಕ್ತಪಡಿಸ್ತಿದಾರೆ. ಅದರಲ್ಲೂ ಕೇವಲ ಸಂಜೆಯ ಒಂದು ಘಂಟೆಯ ಅವಧಿಯಲ್ಲಿ ಮಾತ್ರ ಈ ರೀತಿ ಕಲ್ಲುಗಳು ಮನೆಗಳ ಮೇಲೆ ಬೀಳ್ತಾ ಇರೋದ್ರಿಂದ ಜನರ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಮಾಧ್ಯಮದವರ ಮುಂದೆಯೇ ಬಿತ್ತು ಕಲ್ಲುಗಳು!
ಇನ್ನು ವಾರಗಳಿಂದ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿರುವ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ. ಹೀಗಾಗಿ ರಾಜ್ಯ ಮಟ್ಟದ ಖಾಸಗಿ ವಾಹಿನಿಯವರು ಕಲ್ಲು ಬೀಳುವ ಸಮಯಕ್ಕೆ ಸರಿಯಾಗಿ ಆ ಜಾಗಕ್ಕೆ ಬಂದಿದ್ದಾರೆ. ಆದರೆ ಮಾಧ್ಯದವರು ಬರುವ ವಿಚಾರವನ್ನು ಊರಿನ ಜನರಿಗೆ ತಿಳಿಸದೇ ಗೌಪ್ಯವಾಗಿಡಲಾಗಿತ್ತು. ಹೀಗಿದ್ದರೂ ಸಂಜೆ 6.30 ಘಂಟೆ ಆಗುತ್ತಲ್ಲೇ ಎಂದಿನಂತೆ ಮನೆಗಳ ಮೇಲೆ ಕಲ್ಲುಗಳು ಬೀಳೋಕೆ ಆರಂಭವಾಗಿದೆ. ಮಾಧ್ಯಮದವರ ಮುಂದೆಯೇ ಒಂದೇ ಮನೆಯ ಮೇಲೆ ನಾಲ್ಕೈದು ಕಲ್ಲುಗಳು ಬಿದ್ದಿವೆ. ಆದರೆ ಕೇವಲ ಒಂದು ಘಂಟೆಯ ಅವಧಿಯಲ್ಲಿ ಈ ರೀತಿ ಕಲ್ಲುಗಳು ಬೀಳೋದು ನಿಂತು ಬಿಡುತ್ತೆ. ಹೀಗಾಗಿ ಊರಿನ ಸುತ್ತಮುತ್ತ ಗ್ರಾಮದ ಜನರು ಸೇರಿಕೊಂಡು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪಂಜುರ್ಲಿ ಕೋಲದ ನಂತರ ಕಲ್ಲು ಬೀಳುತ್ತಿದೆಯೆಂತೆ!
ಇನ್ನು ಈ ರೀತಿ ಮನೆಗಳ ಮೇಲೆ ಕಲ್ಲು ಬೀಳ್ತಾ ಇರೋದ್ರ ಬಗ್ಗೆ ಕೆಲವರು ಊರ ದೈವ ಮುನಿಸಿಕೊಂಡಿದೆ ಅನ್ನೋ ಮಾತುಗಳನ್ನು ಕೂಡ ಆಡ್ತಿದಾರೆ. ವಾರದ ಹಿಂದಷ್ಟೇ ಇಲ್ಲಿನ ಮಹಾಕಾಳಿ ದೈವಸ್ಥಾನದಲ್ಲಿ ಪಂಜುರ್ಲಿ ದೈವರ ಕೋಲೋತ್ಸವ ನೆರವೇರಿದ್ದು, ಕೆಲ ದಿನಗಳ ಹಿಂದಷ್ಟೇ ಸಂಪನ್ನಗೊಂಢಿದೆ. ಆದರೆ ಪಂಜುರ್ಲಿ ಕೋಲ ಆರಂಭವಾದ ದಿನವೇ ಮನೆಗಳ ಮೇಲೆ ಕಲ್ಲುಗಳು ಬೀಳೋದಕ್ಕೆ ಆರಂಭವಾಗಿದೆ ಅನ್ನೋದು ಗ್ರಾಮದ ಜನರ ಆತಂಕದ ಮಾತು. ಹೀಗಾಗಿ ದೈವ ಮುನಿಸಿಕೊಂಡ ಕಾರಣದಿಂದಲೇ ಊರಿನ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆಯೇ ಅನ್ನೋ ಪ್ರಶ್ನಾರ್ಥಕ ಭಾವವೂ ಕೆಲವರದ್ದು. ಅಲ್ಲದೇ ಈ ಬಗ್ಗೆ ಕೆಲವರು ಜ್ಯೋತಿಷಿಗಳ ಬಳಿಯಲ್ಲೂ ಕೇಳಿದ್ದು, ಅವರ ಸೂಚನೆಯಂತೆ ತೆಂಗಿ ಕಾಯಿ ಒಡೆದು ಸಮಸ್ಯೆ ನಿವಾರಣೆಗೂ ಯತ್ನಿಸಿದ್ದಾರೆ. ಆದರೆ ಯಾವುದೂ ಫಲ ಕೊಟ್ಟಿಲ್ಲವಂತೆ. ಆದರೆ ಊರಿನ ಕೆಲ ನಾಗರಿಕರು ಮಾತ್ರ ಈ ಮಾತುಗಳನ್ನು ಒಪ್ಪೋದಕ್ಕೆ ಸಿದ್ದರಿಲ್ಲ. ಹೀಗಾಗಿ ಈ ಕಲ್ಲು ಬೀಳೋದರ ಹಿಂದೆ ಯಾರದ್ದೋ ಕೈವಾಡವಿದೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.
ಯುವಕನೊಬ್ಬ ಕಲ್ಲು ಎಸೆಯೋದು ಗೊತ್ತಾಗಿದೆ!
ಹೀಗೆ ಕಲ್ಲುಗಳು ಬೀಳ್ತಾ ಇರೋದು ಕರಾವಳಿಗರ ಮಟ್ಟಿಗೆ ಸ್ವಲ್ಪ ಹೊಸತು. ಆದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಮನೆಗಳ ಮೇಲೆ ಆಗಾಗ್ಗೆ ಕಲ್ಲುಗಳ ಬೀಳುತ್ತಲೇ ಇರುತ್ತೆ. ಆದರೆ ಅದು ಭಾನಾಮತಿ ಕಾಟ ಅಂತಾನೆ ಜನ ಹೇಳುತ್ತಾರೆ. ಸದ್ಯ ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿ ಕಲ್ಲುಗಳು ಬಿಳ್ತಾ ಇರೋದರ ಹಿಂದೆ ಭಾನಾಮತಿ, ದೈವದ ಮುನಿಸಿಗಿಂತಲೂ ಹೆಚ್ಚಾಗಿ ಅಲ್ಲೊಬ್ಬ ವಿಕೃತ ಯುವಕನ ನೆರಳಿರೋದು ಬೆಳಕಿಗೆ ಬಂದಿದೆ. ಕಲ್ಲುಗಳು ಬೀಳ್ತಾ ಇರೋದನ್ನು ಪತ್ತೆ ಹಚ್ಚೋಕೆ ಕಾದಿದ್ದ ಸ್ಥಳೀಯರಿಗೆ ಸ್ಥಳೀಯ ಯುವಕನೊಬ್ಬ ಕಲ್ಲುಗಳನ್ನು ಎಸೆಯೋದು ಕಂಡು ಬಂದಿದೆ. ಆದರೆ ಏಕಾಏಕಿ ಆತನನ್ನು ಹಿಡಿಯೋದು ಬೇಡ ಅಂತ ಕಾದು ಕುಳಿತಿದ್ದಾರೆ. ಇನ್ನು ಹೀಗೆ ಕಲ್ಲುಗಳನ್ನು ಎಸೆಯೋ ಯುವಕ ಸ್ಥಳೀಯನೇ ಆಗಿದ್ದು, ಹೀಗೆ ಉಪಟಳ ನಿರಂತರವಾಗಿ ಮುಂದುವರೆದರೆ ಆತನ ಮನೆಗೆ ನುಗ್ಗಿ ತಮ್ಮದೇ ಭಾಷೆಯಲ್ಲಿ ವಿಚಾರಿಸಿಕೊಳ್ಳೋದಕ್ಕೆ ಊರಿನ ಕೆಲವರು ಸಜ್ಜಾಗಿದ್ದಾರೆ. ಈ ಮಧ್ಯೆ ಇಂದು ಪೊಲೀಸ್ ಠಾಣೆಗೆ ದೂರು ನೀಡಲು ಕೂಡ ಸ್ಥಳೀಯರು ಸಿದ್ದತೆ ನಡೆಸಿದ್ದು, ಅವರ ಮೂಲಕವೇ ಪ್ರಕಣಕ್ಕೊಂದು ಇತೀಶ್ರೀ ಹಾಡಲು ಮುಂದಾಗಿದ್ದಾರೆ.


