ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಇನೋವಾ ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಮದಕ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಪೆಟ್ರೋಲ್ ಕಳವು ನಡೆಸಲು ಬಂದವರಿಂದ ಕೃತ್ಯ ನಡೆದಿದೆ ಅನ್ನುವ ಸಂಶಯದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮದಕ ನಿವಾಸಿ ಜಬ್ಬಾರ್ ಎಂಬವರಿಗೆ ಸೇರಿದ ಕಾರು ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆ ಮನೆಗೂ ಆವರಿಸಿ ಗೋಡೆಯೂ ಬಿರುಕು ಬಿಟ್ಟಿದೆ. ಘಟನೆಯಿಂದ ರೂ.10 ಲಕ್ಷ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿ ಮನೆಮಂದಿ ಮಲಗಿದ ಬಳಿಕ ಸುಮಾರು 1.30ರ ವೇಳೆ ಕೃತ್ಯ ನಡೆದಿದೆ. ಬೆಂಕಿ ಉರಿಯುತ್ತಿರುವುದನ್ನು ನೆರೆಮನೆಯ ಬಾಲಕನೋರ್ವ ಗಮನಿಸಿ ಬೊಬ್ಬೆ ಹಾಕಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ಹಾಗೂ ಸ್ಥಳೀಯರು ಸೇರಿ ಮನೆಗೂ ತಗಲುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಪೆಟ್ರೋಲ್ ಕಳ್ಳರ ಕೃತ್ಯ :
ಈ ಭಾಗದಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳರ ಜಾಲ ಸಕ್ರಿಯವಾಗಿದೆ. ಅಮಲುಪದಾರ್ಥ ಸೇವಿಸುವ ಯುವಕರ ತಂಡ ಮನೆ ಆವರಣದಲ್ಲಿ ನಿಲ್ಲಿಸುವ ವಾಹನಗಳಲ್ಲಿರುವ ಪೆಟ್ರೋಲ್ ಕಳವುಗೈಯ್ಯುತ್ತಿರುವ ಪ್ರಕರಣಗಳು ಆಗಾಗ್ಗ ನಡೆಯುತ್ತಿದೆ. ಜಬ್ಬಾರ್ ಅವರ ಮನೆಗೂ ಬೈಕಿನಿಂದ ಪೆಟ್ರೋಲ್ ಕಳವು ನಡೆಸಲು ಬಂದ ತಂಡ ಲೈಟರ್ ಅನ್ನು ಉರಿದಿರುವುದರಿಂದ ವಾಹನಗಳಿಗೆ ಬೆಂಕಿ ತಗಲಿರುವ ಶಂಕೆ ಮನೆಮಂದಿ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಂಕೆಯ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
















