ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಕಲಿಕೆ ದುಡಿಮೆ ಬದುಕು ಒಂದಾಗಿಸಿದ ಮನಸ್ಸು ಕಟ್ಟುವ ಪ್ರೀತಿ ಹಂಚುವ ನವಸಾಕ್ಷರರ ಸಂಘಟನೆಯ 24 ನೇ ವರ್ಷದ ಅಕ್ಷರೋತ್ಸವ ಹಾಗೂ ಸಂಪೂರ್ಣ ಸೌರಶಕ್ತಿ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದ ವಠಾರದಲ್ಲಿ ನಡೆಯಿತು.
ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ, ಸುಗ್ರಾಮ ಸಂಘ, ಅಪ್ನಾದೇಶ್, ಆದಿವಾಸಿ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ನಡೆದ ಉತ್ಸವವನ್ನು ಸೌರದೀಪ ಬೆಳಗಿಸುವ ಮೂಲಕ ನವಸಾಕ್ಷರೆ ಪ್ರೇಮ ಉದ್ಘಾಟಿಸಿದರು. ಇಡೀ ಭೂಲೋಕಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ತ್ಯಾಜ್ಯ ಮುಕ್ತ ಸ್ವಚ್ಛ ಮನೆ ಹಾಗೂ ಬಡವರ ಮನೆಗಳಿಗೆ ಸೌರ ದೀಪ ಅಳವಡಿಸಿ ಕತ್ತಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿ ಒಮ್ಮನಸ್ಸಿನಿಂದ ಕೆಲಸ ಮಾಡುವುದು ಅಗತ್ಯ ಎಂದರು.
ಸಾಕ್ಷರತೆ, ಸ್ವಚ್ಛತೆ, ಮಹಿಳಾ ಸಬಲೀಕರಣ ಹಾಗೂ ವಿಟ್ಲ ಪಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಧಾ ಶೆಟ್ಟಿಯವರು ರಚಿಸಿದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಸಹಾಯಕ ಪೋಲಿಸ್ ಆಯುಕ್ತ ವಿನಯ.ಎಸ್. ನಾಯಕ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನದಡಿಯಲ್ಲಿ ನಡೆಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ, ವ್ಯಾಜ್ಯ ಮುಕ್ತ, ಸೋಲಾರ್ ಬೆಳಕಿನಿಂದ ಕತ್ತಲು ಮುಕ್ತ ಗ್ರಾಮ ನಿರ್ಮಾಣ ಕಾರ್ಯಗಳು ಶ್ಲಾಘನೀಯವಾಗಿದೆ. ಜನರ ಮಾಹಿತಿ ಮತ್ತು ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಪೋಲಿಸ್ ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು ಎಂದರು. ಸಂಪೂರ್ಣ ಸೌರ ಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ ಪತ್ರವನ್ನು ಮಹಾತ್ಮಗಾಂಧಿ ನರೇಗಾದ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ ಬಿಡುಗಡೆಗೊಳಿಸಿ ಮಾಹಿತಿ ನೀಡಿ ತ್ಯಾಜ್ಯ ಮುಕ್ತ ಮಾದರಿ ಸೋಲಾರ್ ಗ್ರಾಮ ಕುರಿತ ಪ್ರಮಾಣ ವಚನ ಬೋದಿಸಿದರು. ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥ ಶ್ಯಾಮ್ ಭಟ್‍ರವರು ಸೋಲಾರ್ ಅಳವಡಿಸುವುದರಿಂದಾಗುವ ಪ್ರಯೋಜನದ ಬಗ್ಗೆ ಅನುಭವವನ್ನು ಹಂಚಿಕೊಂಡರು. ಸೆಲ್ಕೋ ಸೋಲಾರ್‍ನ ಹಿರಿಯ ವ್ಯವಸ್ಥಾಪಕ ಕೃಷ್ಣರಾಜ್ ಸೋಲಾರ್ ದೀಪದ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಪತ್ರ ವಿತರಿಸಿ ಮಾಹಿತಿ ನೀಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ಅಪ್ನಾದೇಶ್ ಸಂಚಾಲಕ ಅಶೋಕ್ ಭಟ್, ಅರುಣ್ ಕುಮಾರ್ ಸುವರ್ಣ, ಅಬೂಬಕ್ಕರ್ ಸುರಿಬೈಲು, ಕಮಲ ಗೌಡ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹ ಮಾತುಗಳನ್ನಾಡಿದರು.
ಗ್ರಾಮ ವಿಕಾಸದ ಕಲ್ಪನೆ ಮತ್ತು ಕಾರ್ಯಸಾಧನೆಯ ಬಗ್ಗೆ ಪ್ರೇರಕಿ ಅರುಣಾ ಮತ್ತು ತಂಡದವರು, ಸುಗ್ರಾಮ ಸಂಘದ ಕಲ್ಪನೆ ಮತ್ತು ಕಾರ್ಯಸಾಧನೆಯ ಬಗ್ಗೆ ಪುತ್ತೂರು ತಾಲೂಕಿನ ಜಯ, ಮಂಗಳೂರು ತಾಲೂಕಿನ ಸವಿತಾ ಟಿ.ಎನ್. ಬಂಟ್ವಾಳ ತಾಲೂಕಿನ ಸುಧಾ ಎಸ್ ಶೆಟ್ಟಿ, ಉಡುಪಿಯ ಪ್ರಭಾ ಮತ್ತು ಸೌಮ್ಯ ತಂಡದವರು ಸ್ವ ಅನುಭ ಮತ್ತು ಸುಗ್ರಾಮ ಗೀತೆಯ ಮೂಲಕ ನಿರೂಪಿಸಿದರು. ಆದಿವಾಸಿ ಅಭಿವೃದ್ಧಿಯ ಬಗ್ಗೆ ಕಮಲ, ಲೀಲ, ನವಸಾಕ್ಷರರ ಕಲಿಕಾ ಸಾಧನೆಗಳ ಬಗ್ಗೆ ಮುಂಗುಲಿ ಕೊರಗ, ಹುಸೈನ್, ಯಶೋಧ ಅನುಭವ ಹಂಚಿಕೊಂಡರು. ಬನ್ನೂರು ಗ್ರಾ.ಪಂ ಮಹಿಳೆಯರ ಜನಪದ ನೃತ್ಯಗಳು, ಬಾಳೆಪುಣಿಯ ಸದಾನಂದ ಮತ್ತು ತಂಡದ ದುಡಿಕುಣಿತ, ಆದಿವಾಸಿಗಳ ಗಿರಿಸಿರಿ ತಂಡದ ಡೋಲು ಕುಣಿತ, ಆಲಂಕಾರು ನವಸಾಕ್ಷರೆ ಪ್ರೇಮ ಕುಟುಂಬದ ಸದಸ್ಯರು ಅಭಿನಯಿಸಿದ ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಕುರಿತ ಕಿರು ನಾಟಕ, ಉಡುಪಿ ಸುಗ್ರಾಮದ ಜಾನಪದ ಕುಣಿತ, ಗುತ್ತಿಗಾರು ಅಚ್ಚುತ್ತ ತಂಡದ ಜನಪದ ಗೀತೆಗಳು, ಸಾಂತ್ವನ ಕೇಂದ್ರದ ಮಹಿಳೆಯರ ಯಶೋಗಾಥೆ ಮತ್ತು ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ನವಚೇತನ ವೃತ್ತಿ ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಆಶಯ ಗೀತೆ ಹಾಡಿದರು. ಜನ ಶಿಕ್ಷಣ ಟ್ರಸ್ಟ್‍ನ ಸಹ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ಸಂಯೋಜಕರಾದ ಚಂಚಲ, ರಶ್ಮ, ಅಕ್ಷತ, ದಿವ್ಯ ಸಹಕರಿಸಿದರು.




