ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಅದು ಅದ್ದೂರಿ ಸಾಹಿತ್ಯ ಜಾತ್ರೆಗಳ ಮಧ್ಯೆ ತಲೆ ಎತ್ತಿದ ವೈಚಾರಿಕ ನುಡಿಹಬ್ಬ. ಖಾಸಗಿ ಸಮ್ಮೇಳನಗಳಿಗೆ ಸಡ್ಡು ಹೊಡೆದ ಪ್ರಗತಿಪರರ ಅಭಿವ್ಯಕ್ತಿಯ ಸಂಗಮ. ಇಲ್ಲಿ ಖಾಸಗಿ ಸಾಹಿತ್ಯ ಜಾತ್ರೆಯ ಅದ್ದೂರಿತನವಿಲ್ಲ, ಸರ್ಕಾರಿ ಆತಿಥ್ಯದ ಆಡಂಬರವಿಲ್ಲ ಇದು ಅಭಿಮತ ಅನ್ನೋ ಸಂಘಟನೆ ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಸುತ್ತಾ ಬರುತ್ತಿರುವ ಜನನುಡಿ ಕಾರ್ಯಕ್ರಮದ ವಿಶೇಷ.
ಈ ಬಾರಿ ಮೂರನೇ ವರ್ಷದ ಅದ್ದೂರಿ ಜನನುಡಿ ಕಾರ್ಯಕ್ರಮವು ಹಿರಿಯ ಸಾಹಿತಿ ದೇವನೂರು ಮಹಾದೇವರಿಂದ ಉದ್ಘಾಟನೆಗೊಂಡಿತು.ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ನೂರಾರು ಸಮಾನಮನಸ್ಕರು ಜನನುಡಿಯ ವಿಭಿನ್ನತೆಗೆ ಸಾಕ್ಷಿಯಾಗಿದ್ದರು.

ನುಡಿಜಾತ್ರೆಯಲ್ಲಿ ರಾಜ್ಯದ ಹಿರಿಯ ಸಾಹಿತಿಗಳು ಪಾಲ್ಗೊಂಡಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಮುಖ್ಯವಾಗಿ ಅದ್ದೂರಿ ಸಾಹಿತ್ಯ ಜಾತ್ರೆಗಳ ವಿರುದ್ಧ ಹುಟ್ಟಿಕೊಂಡ ಪರಿಕಲ್ಪನೆ ಅನ್ನೋ ಮಾತಿದೆ. ಅದರಲ್ಲೂ ಮೂಡಬಿದ್ರೆಯಲ್ಲಿ ಮೋಹನ್ ಆಳ್ವಾ ನಡೆಸುವ ಆಳ್ವಾಸ್ ನುಡಿಸಿರಿಯ ವಿರುದ್ಧವಾಗಿ ಹುಟ್ಟಿಕೊಂಡ ಪ್ರಗತಿಪರರ ನುಡಿಹಬ್ಬ ಎಂದರೆ ತಪ್ಪಗಲಾರದು.
ಕಳೆದ ಮೂರು ವರ್ಷಗಳಿಂದ ಎರಡು ದಿನಗಳ ಕಾಲ ನಡೆಯೋ ಈ ನುಡಿ ಹಬ್ಬದಲ್ಲಿ ಹಾಡು ನೃತ್ಯಗಳ ಅಬ್ಬರವಿಲ್ಲ. ಬದಲಾಗಿ ಸಮಾಜದಲ್ಲಿ ನಡೀತಾ ಇರೋ ಶೋಷಣೆಗಳ ವಿರುದ್ಧ ಧ್ವನಿಯಾಗಿ ಜನನುಡಿ ವೈಚಾರಿಕ ಚರ್ಚೆಗೆ ಅವಕಾಶ ನೀಡಲಾಗಿದೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಎಚ್.ಎಸ್.ಅನುಪಮಾ, ಹೋರಾಟಗಾರ ಕಡಿದಾಳ್ ಶಾಮಣ್ಣ ಸೇರಿದಂತೆ ಹಲವಾರು ವಿಚಾರವಂತರು ಸಾಮಾಜಿಕ ತಲ್ಲಣಗಳ ಬಗ್ಗೆ ಮಾತನಾಡಿದರು. ಈ ಮಧ್ಯೆ ಹತ್ತಾರು ಕ್ರಾಂತಿ ಗೀತೆಗಳ ಜೊತೆಗೆ ಒಂದಷ್ಟು ಸಾಮಾಜಿಕ ತುಡಿತದ ಗೀತೆಗಳು ಕೂಡ ಯುವ ಪ್ರಗತಿಪರರ ಧ್ವನಿಯಲ್ಲಿ ಮೊಳಗಿದವು.




