ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಶ್ರೀ ನಾಗಬ್ರಹ್ಮ ಸ್ಥಾನದಲ್ಲಿ ಜನವರಿಯಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಆಮಂತ್ರಣ ಬಿಡುಗಡೆಗೊಳಿಸಿ, ಯಾವುದೇ ಒಂದು ಸಾಧನೆ ಮಾಡಬೇಕಾದರೆ ಅದರ ಹಿಂದೆ ಸಾಕಷ್ಟು ತ್ಯಾಗ ಇರುತ್ತದೆ, ಕೊಲ್ಯದಲ್ಲಿ ನಾಗಮಂಡಲ ನಡೆಯಲು ತ್ಯಾಗವೇ ಕಾರಣ. ಹಿಂದೆ ರಾಜಾಡಳಿತದಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಿದ್ದರೂ ರಾಜರ ನೆರವು ಕೇಳಲಾಗುತ್ತಿತ್ತು, ಇಂದು ಸರ್ಕಾರದ ನೆರವು ಅಗತ್ಯ ಎಂದು ತಿಳಿಸಿದರು.
ನಾಗಮಂಡಲೋತ್ಸವಕ್ಕೆ ವರ್ಷಾನುಗಟ್ಟಲೆ ಯೋಜನೆ ರೂಪಿಸಿ ಮುಂದಿನ ಕಾರ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ಕೊಲ್ಯದಲ್ಲಿ ಇದೇ ರೀತಿ ಯೋಜನೆ ರೂಪಿಸಲಾಗಿದ್ದು ಈ ಮೂಲಕ ಕ್ಷೇತ್ರ, ನಾಡು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ಆgರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಹರೇಕಳದಲ್ಲಿ ನಾಗಮಂಡಲೋತ್ಸವ ನಡೆಯುವ ಸಂದರ್ಭ ತಾನು ಶಾಸಕನಾಗಿ ಆಯ್ಕೆಯಾಗಿದ್ದು, ಕೊಲ್ಯದಲ್ಲಿ ನಾಗಮಂಡಲೋತ್ಸವ ಸಂದರ್ಭ ಸಚಿವನಾಗಿದ್ದೇನೆ. ಇದಕ್ಕೆ ದೇವರ ಕೃಪೆ, ಹಿರಿಯರ ಆಶೀರ್ವಾದ ಕಾರಣ. ಕಾರ್ಯಕ್ರಮ ಯಶಸ್ವಿಗಾಗಿ ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಅಂಡಾಲ ಜಗದೀಶ ಭಟ್ ಮರಕಡ, ಶ್ರೀ ಕ್ಷೇತದ ಧರ್ಮದರ್ಶಿ ಬಾಸ್ಕರ ಐತಾಳ್, ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಗೌರವ ಅಧ್ಯಕ್ಷರಾದ ಶಿವಣ್ಣ ಶೆಟ್ಟಿ ಲಿಂಗಮಾರುಗುತ್ತು, ಸೀತಾರಾಮ ಬಂಗೇರ, ಚಂದ್ರಶೇಖರ್ ಉಚ್ಚಿಲ್, ಸದಾಶಿವ ಉಳ್ಳಾಲ್, ರಮೇಶ್ ಶಿವಭಾಗ್, ಅಶೋಕ್ ಕುಮಾರ್ ಡಿ.ಕೆ, ಸ್ವಾಗತ ಮತ್ತು ಸತ್ಕಾರ ಸಮಿತಿ ಪ್ರಧಾನ ಸಂಚಾಲಕ ಕೆ.ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ಪೂಂಜ, ಮಹೇಶ್ ಮೂರ್ತಿ ಸುರತ್ಕಲ್, ಶೇಷಪ್ಪ ಸಾಲ್ಯಾನ್ ಬಂಗ್ರ ಮಂಜೇಶ್ವರ, ಗೌರವ ಪ್ರಧಾನ ಕಾರ್ಯದರ್ಶಿ ಅಮೃತ್ ವಿ.ಕದ್ರಿ, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್‍ಪಳಿಕೆ, ಸುಶ್ಮಾ ಜನಾರ್ದನ್, ಸೌಮ್ಯ ಬಾಸ್ಕರ ಐತಾಳ್, ರಾಜೀವಿ ಕೆಂಪುಮಣ್ಣು ಮೊದಲಾದವರು ಉಪಸ್ಥಿತರಿದ್ದರು.
ಸಂ.ಪ್ರಧಾನ ಕಾರ್ಯದರ್ಶಿ ದಿನೇಶ್ ಮರೋಳಿ ಸ್ವಾಗತಿಸಿದರು. ಮೋಹನ್‍ದಾಸ್ ಶೆಟ್ಟಿ ನೆತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


