ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೆ.ಸಿ.ರೋಡ್: ಮುದುಂಗಾರುಕಟ್ಟೆ ಶಾಲೆ ಬಳಿ ಕೆ.ಸಿ.ರೋಡಿನ ಮದರಸದಲ್ಲಿ ಉಸ್ತಾದರಾಗಿರುವ ಮಹಮ್ಮದ್ ಮುನೀರ್ ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿ, ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಬಾಳೆಪುಣಿಯ ಅನಿತಾ ಎಂಬವರಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದಡಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿರುವ ಉಸ್ತಾದ್ ಅವರಿಗೂ ಠಾಣೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಫೈಲ್ ಫೋಟೊ
ಕೆ.ಸಿ.ರೋಡಿನ ಮದರಸದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಸಾಲೆತ್ತೂರು ಕೊಳ್ನಾಡು ನಿವಾಸಿ ಮಹಮ್ಮದ್ ಮುನೀರ್ ಬೈಕಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದಾಗ ಮುದುಂಗಾರುಕಟ್ಟೆ ಶಾಲೆಯ ಬಳಿ ಸಚಿನ್(26), ಪ್ರಶಾಂತ್ (28), ಪ್ರವೀಣ್ (28), ಪ್ರಸಾದ್ (33), ಸಂತೋಷ್, ಚಂದ್ರಶೇಖರ್ ಎಂಬವರು ಅಡ್ಡಗಟ್ಟಿ ಗಂಭೀರ ಹಲ್ಲೆ ನಡೆಸಿದ್ದರು. ಗಾಯಾಳು ಉಸ್ತಾದರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐದು ಮಂದಿಯ ವಿರುದ್ಧ ದೂರು ದಾಖಲಾಗಿತ್ತು.
ಪ್ರತಿದೂರು :
ಎರಡು ವಾರಗಳ ಹಿಂದೆ ಬಾಳೆಪುಣಿ ನಿವಾಸಿ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕೆ.ಸಿ.ರೋಡಿನಿಂದ ಮನೆಗೆ ಹೋಗುತ್ತಿದ್ದ ಉಸ್ತಾದ ಮಹಮ್ಮದ್ ಮುನೀರ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಯುವಕರು ಉಸ್ತಾದರಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಕುರಿತು ಮಹಿಳೆ ಕೊಣಾಜೆ ಠಾಣೆಯಲ್ಲಿ ದಾಖಲಿಸಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಇತ್ತಂಡದವರು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸುವ ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಸಣ್ಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಉಸ್ತಾದ್ ಕೂಡಾ ಠಾಣೆಯಲ್ಲೇ ಜಾಮೀನು ದೊರೆತಿದೆ.



