ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಖಾಸಗಿ ಶಾಲೆ ವಿದ್ಯಾರ್ಥಿನಿಗೆ ಶಾಲಾ ವಾಹನ ಚಾಲಕನಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತೊಕ್ಕೊಟ್ಟುವಿನ ಆಸ್ಪತ್ರೆ ಎದುರುಗಡೆ ನಡೆದ ಹಿಂಸಾಚಾರ, ಗಲಭೆ ಮತ್ತು ವಾಹನ ಚಾಲಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಾಡೂರು ನಿವಾಸಿಗಳಾದ ಆಸೀಫ್ (33) ಮತ್ತು ಸೈಯ್ಯದ್ ಉಮ್ಮರ್ ಕೋಯ (25) ಎಂಬವರನ್ನು ಬಂಧಿಸಲಾಗಿದೆ.
2015ರ ಎ.13ರಂದು ತೊಕ್ಕೊಟ್ಟು ಖಾಸಗಿ ಶಾಲೆ ಯುಕೆಜಿ ವಿಭಾಗದ ವಿದ್ಯಾರ್ಥಿನಿಯ ಮೇಲೆ ಶಾಲಾ ವಾಹನ ಚಾಲಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ತಂಡವೊಂದು ಶಾಲೆಗೆ ಅಕ್ರಮ ಪ್ರವೇಶಗೈದು, ಚಾಲಕನಿಗೆ ಗಂಭೀರವಾಗಿ ಹಲ್ಲೆ ನಡೆಸಿತ್ತು. ಬಳಿಕ ತೊಕ್ಕೊಟ್ಟು ಸಹಾರಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ವಿದ್ಯಾರ್ಥಿನಿಯನ್ನು ಕೊಂಡೊಯ್ದ ಸಂದರ್ಭ ಆಸ್ಪತ್ರೆ ಹೊರಗೆ ಜಮಾಯಿಸಿದ್ದ ತಂಡ ಬಸ್ಸಿಗೆ ಮತ್ತು ಪೊಲೀಸ್ ವಾಹನಕ್ಕೆ ಕಲ್ಲೆಸೆದು ಹಾನಿಗೊಳಿಸಿತ್ತಲ್ಲದೆ, ಮಾಧ್ಯಮದವರ ಮೇಲೂ ಮುಗಿಬಿದ್ದು, ಕೆಮರಾ ಕಸಿಯಲು ಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿತ್ತು. ಬಳಿಕ ಪೊಲೀಸರು ಲಾಠಿ ಚಾರ್ಜ್ ನಡೆಸಿ ಉದ್ರಿಕ್ತ ಜನರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಂಗಳವಾರ ನಸುಕಿನ ವೇಳೆ ಎಸ್.ಐ ಭಾರತಿ ನೇತೃತ್ವದ ಪೊಲೀಸರ ತಂಡ ಮಾಡೂರು ಬಳಿ ಹಲವರ ಮನೆಗೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿತ್ತು.
ಠಾಣೆಗೆ ಮುತ್ತಿಗೆ:
ಅಮಾಯಕರ ಬಂಧನ ನಡೆದಿದೆ ಎಂದು ಆರೋಪಿಸಿ ಎಸ್ ಡಿಪಿಐ ಮುಖಂಡರ ನೇತೃತ್ವದಲ್ಲಿ ಉಳ್ಳಾಲ ಠಾಣೆಗೆ ನಿನ್ನೆ ಮುತ್ತಿಗೆ ಹಾಕಲಾಯಿತು. ಅಲ್ಲದೆ ಎಲ್ಲರನ್ನು ಬಿಡುಗಡೆಗೊಳಿಸಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ. ವಿಚಾರಣೆ ಬಳಿಕ ಮಾಡೂರು ನಿವಾಸಿಗಳೇ ಆಗಿರುವ ಮೊಯೀನ್ ಯು.ಕೆ ಮತ್ತು ಇಮ್ತಿಯಾಝ್ ಎಂಬಿಬ್ಬರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಉಳಿದಿಬ್ಬರು ಆರೋಪಿಗಳಾದ ಆಸೀಫ್ ಮತ್ತು ಉಮ್ಮರ್ ಕೋಯ ಅವರನ್ನು ಬಂಧಿಸಿದ್ದಾರೆ.



