ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಮಳೆ ಅವಾಂತರದಿಂದ ರಾಜ್ಯವೇ ತತ್ತರಿಸಿಹೋಗಿದೆ. ಇದೀಗ ಮತ್ತೆ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಲ್ಲಿನ ಮನೆ ಜಲಾವೃತಗೊಂಡಿದೆ. ಭೂಕುಸಿತ, ಟ್ರಾಫಿಕ್ ಜಾಮ್ ನಿಂದ ಜನರು ಕಂಗಾಲಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇದೀಗ 100 ವರ್ಷಗಳ ದಾಖಲೆಯನ್ನು ಮುರಿದಿದೆ. ಮಳೆಯಿಂದಾಗಿ ತಮಿಳುನಾಡಿನ ಪ್ರಮುಖ ಮಧ್ಯಕೈಲಾಶ್ ಸಿಗ್ನಲ್ ರಸ್ತೆ ಕುಸಿತಗೊಂಡಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿದ್ದು ಭಾರೀ ಮಳೆಗೆ ಈಗಾಗಲೇ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಹಲವು ಶಾಲಾ, ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಘೋಷಿಸಿದೆ.
ಚೆನ್ನೈನಲ್ಲಿ ಇನ್ನೂ 3, 4 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮಣನ್ ತಿಳಿಸಿದ್ದು ಇದೇ ರೀತಿ ಮಳೆ ಸುರಿಯುತ್ತಿದ್ದರೆ ಕರಾವಳಿ ತೀರ ಪ್ರದೇಶಗಳಲ್ಲಿ ಪ್ರವಾಹವುಂಟಾಗುವ ಭೀತಿ ಇದೀಗ ಎಲ್ಲರಲ್ಲೂ ಉಂಟು ಮಾಡಿದೆ. ಬೆಂಗಳೂರು, ಕೋಲಾರ ಸೇರಿದಂತೆ ಕರ್ನಾಟಕದ ಹಲವೆಡೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.


