ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಕ್ರೀಡೆಯಿಂದ ಉತ್ತಮ ನಾಯಕತ್ವ ಗುಣ, ದೈಹಿಕ ದೃಢತೆ, ಆರೋಗ್ಯ, ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲು ಖಂಡಿತಾ ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವಲ್ಲಿ ಕ್ರೀಡೆಯು ಪರಿಣಾಮಕಾರಿಯಾಗಿದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಕೌಶಿಕ್ ಬೋಳೂರು ಅವರು ಅಭಿಪ್ರಾಯ ಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ 18ನೇ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಮಂಗಳೂರು ವಿವಿಯ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಬಹಳಷ್ಟು ಅವಕಾಶಗಳಿದ್ದು ಇದರ ಸದುಪಯೋಗವಾಗಬೇಕಿದೆ. ವಿದ್ಯಾರ್ಥಿಗಳು ಪಠ್ಯದ ಜೊತಗೆ ಪಠ್ಯೇತರ ಚಟುವಟಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಶಿಕ್ಷಣ ಕ್ಷೇತ್ರದ ಸಾಧನೆಯ ಜೊತೆಗೆ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕ್ರೀಡಾ ಸಲಹೆಗಾರರಾದ ಡಾ.ಮುರಲೀ ಕೃಷ್ಣ ಅವರು ಮಾತನಾಡಿ ನಿಟ್ಟೆ ವಿಶ್ವವಿದ್ಯಾನಿಲಯವು ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಪ್ರೊ.ಧನೇಶ್ ಕುಮಾರ್ ಕೆ.ಯು, ಕಾಲೇಜಿನ ಕ್ರೀಡಾ ಮುಖ್ಯಸ್ಥರಾದ ಅಜಯ್ ಠಾಕೂರು, ನಿಖಿಲ್ ಎನ್.ಪಿ. ಇನ್ನಿತರರು ಉಪಸ್ಥಿತರಿದ್ದರು.


