ನವದೆಹಲಿ: ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ‘ದೇವರ ಹೆಸರು’, ಪವಿತ್ರಗ್ರಂಥಗಳ ಹೆಸರನ್ನು ಟ್ರೇಡ್ಮಾರ್ಕ್ ಆಗಿ ಬಳಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಬಿಹಾರದ ಲಾಲ್ಬಾಬು ಪ್ರಿಯದರ್ಶಿ ಎಂಬ ಕಂಪನಿ ತನ್ನ ಅಗರಬತ್ತಿಗೆ `ರಾಮಾಯಣ’ ಎಂದು ಹೆಸರಿಟ್ಟುಕೊಳ್ಳಲು ಬೌದ್ಧಿಕ ಹಕ್ಕು ಮನವಿ ಮಂಡಳಿಯ ಮುಂದೆ ಕೋರಿಕೊಂಡಿತ್ತು. ಇದನ್ನು ಅಮೃತ್ ಪಾಲ್ ಸಿಂಗ್ ಎಂಬುವರು ವಿರೋಧಿಸಿದ್ದರು. ಮಂಡಳಿ ಬಿಹಾರ ಕಂಪನಿಗೆ ಈ ಟ್ರೇಡ್ಮಾರ್ಕ್ ನೀಡಲು ನಿರಾಕರಿಸಿತ್ತು. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ.ಎನ್ .ವಿ.ರಾಮಣ್ಣ ಅವರನ್ನೊಳಗೊಂಡ ಪೀಠ ಪ್ರಿಯದರ್ಶಿ ಸಂಸ್ಥೆಯ ವಿರುದ್ಧ ತೀರ್ಪಿತ್ತಿದೆ.
“ರಾಮಾಯಣ’ ಎಂಬುದು ಒಂದು ಧರ್ಮ ಗ್ರಂಥ. ಅದನ್ನು ವ್ಯಾಪಾರದ ಟ್ರೇಡ್ ಮಾರ್ಕ್ ರೀತಿ ಬಳಸುವುದು ವಾಣಿಜ್ಯ ವಹಿವಾಟು ಕಾಯಿದೆ ಪ್ರಕಾರ ಸರಿಯಲ್ಲ ಎಂದು ಪೀಠ 16 ಪುಟಗಳ ತೀರ್ಪಿನಲ್ಲಿ ಹೇಳಿದೆ. ಅಗರಬತ್ತಿ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ರಾಮ, ಲಕ್ಷ್ಮಣ, ಸೀತೆಯರ ಚಿತ್ರಕ್ಕೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಪವಿತ್ರ ಗ್ರಂಥಗಳಾದ ಕುರಾನ್, ಬೈಬಲ್, ಗ್ರಂಥ ಸಾಹಿಬ್, ರಾಮಾಯಣ ಮುಂತಾದ ಗ್ರಂಥಗಳ ಹೆಸರನ್ನು ಮಾರಾಟ ವಸ್ತು ಅಥವಾ ಸೇವೆಗೆ ಬಳಸಿಕೊಳ್ಳಬಹುದೇ”, ಎಂಬ ಪ್ರಶ್ನೆಗೆ ಕಾನೂನಿನ ಪ್ರಕಾರ ವ್ಯಾಪಾರಕ್ಕೆ ದೇವ ದೇವತೆಗಳ ನೆರವು ಪಡೆಯುವಂತಿಲ್ಲ ಕಾರಣ ಇದು ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಿದೆ ಎಂಬ ನ್ಯಾಯಪೀಠ ಹೇಳಿದೆ.ದೇವರ ಹೆಸರಿನ ಪಕ್ಕ ಮತ್ತೊಂದು ಹೆಸರು ಸೇರಿಸಲು ಅನುಮತಿಯನ್ನು ಕೋರ್ಟ್ ನೀಡಿದೆ.


