ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಉಳ್ಳಾಲದಲ್ಲಿ ದುಷ್ಕರ್ಮಿಗಳ ಹಾವಳಿ ಮುಂದುವರೆದಿದ್ದು ತೊಕ್ಕೊಟ್ಟು ಟಿ.ಸಿ.ರೋಡ್ ಬಳಿಯ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್ನಲ್ಲಿ ಬಂದ ಆಗಂತುಕರಿಬ್ಬರು ಕಲ್ಲೆಸೆದು ಕಿಟಕಿಯ ಗಾಜನ್ನು ಹಾನಿಗೈದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಖಂಡಿಸಿ ಸ್ಥಳೀಯ ಹಿಂದು ಮತ್ತು ಮುಸ್ಲಿಂ ಮುಖಂಡರುಗಳು ಸೇರಿಕೊಂಡು ದುಷ್ಕರ್ಮಿಗಳಿಗೆ ಅಜ್ಜನೇ ಶಿಕ್ಷೆ ನೀಡಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಹರಕೆ ಇಟ್ಟ ಪ್ರಸಂಗವೂ ಇಲ್ಲಿ ಜರಗಿತು.
ತೊಕ್ಕೊಟ್ಟು ಒಳಪೇಟೆಯಲ್ಲಿ ತುಳಸೀ ಹಬ್ಬದ ಪ್ರಯುಕ್ತ ನಿನ್ನೆ ರಾತ್ರಿ ಜನನಿಬಿಡ ವಾತಾವರಣ ಇತ್ತು. ಅದರ ನಡುವೆಯೂ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಟಿ.ಸಿ.ರೋಡ್ ಬಳಿಯಿರುವ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಕಲ್ಲೆಸೆದು ಹಾನಿಗೊಳಿಸಿ ಪರಾರಿಯಾದರು.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿ, ಜನ ಜಮಾಯಿಸಲು ಆರಂಭಿಸಿದರು. ಕೂಡಲೇ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ವಿಷಯ ತಿಳಿದು ಎರಡು ಕೋಮಿನ ಮುಖಂಡರುಗಳು ಸ್ಥಳದಲ್ಲಿ ಜಮಾಯಿಸಿದರು. ಅಲ್ಲದೆ ಈಗಾಗಲೆ ಉಳ್ಳಾಲ ಮತ್ತು ತೊಕ್ಕೊಟ್ಟು ಭಾಗದಲ್ಲಿ ಕೆಲವೇ ಮಂದಿ ನಡೆಸುವ ಕೃತ್ಯಗಳಿಗೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಘಟನೆಗಳನ್ನು ದೊಡ್ಡದಾಗಿಸಿದರೆ ದುಷ್ಕರ್ಮಿಗಳ ಕೃತ್ಯಗಳಿಗೆ ಇನ್ನಷ್ಟು ಹುರಿದುಂಬಿಸಿದಂತಾಗುತ್ತದೆ ಅನ್ನುವ ತೀರ್ಮಾನಕ್ಕೆ ಬಂದ ಮುಖಂಡರು ಯಾವುದೇ ಪ್ರಕರಣವನ್ನು ದಾಖಲಿಸಲು ಮುಂದಾಗಿಲ್ಲ. ಬದಲಾಗಿ ಹಿಂದೂಗಳಾದ ಚಂದ್ರಹಾಸ್ ಉಳ್ಳಾಲ್, ಭಗವಾನ್ದಾಸ್, ಭರತ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಯು.ಎಚ್. ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರುಗಳು ಜತೆಯಾಗಿ ಕೊರಗಜ್ಜನ ಕಟ್ಟೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಹರಕೆ ಇಟ್ಟರು :
ಜತೆಯಾಗಿ ಪ್ರಾರ್ಥನೆ ಸಲ್ಲಿಸಿದ ಮುಖಂಡರು ಆರೋಪಿಗಳಿಬ್ಬರಿಗೆ ತಕ್ಕ ಶಿಕ್ಷೆಯಾಗುವಂತೆ ಹರಕೆ ಇಡಲಾಯಿತು. ಅಲ್ಲದೆ ಇಂತಹ ಕೃತ್ಯಗಳನ್ನು ನಡೆಸಿ ಜನರಿಗೆ ತೊಂದರೆ ನೀಡುವ ಕೋಮುವಾದಿಗಳಿಗೆ ಅಜ್ಜ ಸರಿಯಾದ ಬುದ್ಧಿಯನ್ನು ಒದಗಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ ಅವರು ಪ್ರದೇಶದಲ್ಲಿ ಜನ ಸೌಹಾರ್ದಯುತವಾಗಿ ಬಾಳುತ್ತಿದ್ದು, ಅದೇ ರೀತಿಯ ಶಾಂತಿಯುತ ವಾತಾವರಣ ಮುಂದುವರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಘಟನಾ ಸ್ಥಳಕ್ಕೆ ಎಸಿಪಿ ಕಲ್ಯಾಣ್ ಶೆಟ್ಟಿ, ಉಳ್ಳಾಲ ಇನ್ಸ್ಪೆಕ್ಟರ್ ಸವಿತ್ರ ತೇಜ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.






