ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಒಂಭತ್ತುಕೆರೆ: ಟಿಪ್ಪು ಜಯಂತಿಯ ದಿನದಿಂದ (ನವಂಬರ್ 10) ಆರಂಭವಾದ ಅಹಿತಕರ ಘಟನೆಗಳ ಸರಣಿ ಇತರೆಡೆಗಳಲ್ಲಿ ಕಡಿಮೆಯಾಗುತ್ತಾ ಬಂದಿದ್ದರೂ ಉಳ್ಳಾಲದಲ್ಲಿ ಮಾತ್ರ ಇಂತಹ ಘಟನೆಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿನ ಒಂಬತ್ತುಕೆರೆಯ ಅಬ್ಬಂಜರ ಶ್ರೀಗೋಪಾಲಕೃಷ್ಣ ಭಜನಾ ಮಂದಿರಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಕಿಟಕಿ ಗಾಜುಗಳನ್ನು ಪುಡಿಗೈದ ಘಟನೆ ಸೋಮವಾರ ನಡೆದಿದೆ.
ಜೊತೆಗೆ ಮಂದಿರದ ಮುಂದೆ ನಿಲ್ಲಿಸಲಾಗಿದ್ದ ಮಿನಿಬಸ್ಗೆ ಕೂಡಾ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಬಿಗಿಪಹರೆ ನೀಡುತ್ತಿದ್ದಾರೆ.
ನಿನ್ನೆಯಷ್ಟೇ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್ಆರ್ಪಿ ಜಂಟಿಯಾಗಿ ಪಥಸಂಚಲನ ನಡೆಸಿದ ಬೆನ್ನಿಗೇ ಇಂದು ಮತ್ತೆ ಕಿಡಿಗೇಡಿಗಳು ತಮ್ಮ ಕುತಂತ್ರವನ್ನು ಮುಂದುವರಿಸಿದ್ದಾರೆ.
ಯುವಕರಿಗೆ ಚೂರಿಯಿರಿತ, ಬಸ್ಗಳಿಗೆ ಕಲ್ಲು ಹೀಗೆ ಹಲವು ಘಟನೆಗಳ ನಂತರವೂ ಉಳ್ಳಾಲದ ಜನರು ಶಾಂತಿ ಕಾಯ್ದುಕೊಂಡು ಬಂದಿದ್ದು ದುಷ್ಕರ್ಮಿಗಳ ಗಲಭೆಯನ್ನು ಸೃಷ್ಠಿಸುವ ಹುನ್ನಾರವನ್ನು ವಿಫಲ ಮಾಡಿದ್ದಾರೆ.
ಈ ಮಧ್ಯೆ ಉಳ್ಳಾಲ ಪರಿಸರದಲ್ಲಿ ಶಾಂತಿ ಕೆಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.



