ಉಳ್ಳಾಲ್ ನ್ಯೂಸ್ ಡೆಸ್ಕ್
ಮಂಗಳೂರು: ಮಡಿಕೇರಿ ಗಲಭೆಯಲ್ಲಿ ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಹತ್ಯೆ ಮತ್ತು ಟಿಪ್ಪು ಜಯಂತಿ ವಿರೋಧಿಸಿ ಬಜರಂಗದಳ ಕರೆ ನೀಡಿದ್ದ ರಾಜ್ಯ ಬಂದ್ನ್ನು ಹಿಂತೆಗೆದುಕೊಂಡಿದ್ದು, ಬದಲಾಗಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ತಿಳಿಸಿದೆ.

ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕಚೇರಿಗಳ ಎದುರುಗಡೆ ಪ್ರತಿಭಟನೆ ನಡೆಸಲು ವಿ.ಹಿಂ.ಪ ಮತ್ತು ಬಜರಂಗದಳದ ಮುಖಂಡರಾದ ಜಗದೀಶ್ ಶೇಣವ ಮತ್ತು ಶರಣ್ ಪಂಪ್ ವೆಲ್ ಕರೆ ನೀಡಿದ್ದಾರೆ.
ಪ್ರತಿಭಟನಾ ರ್ಯಾಲಿ 11 ರಿಂದ 12ರವರೆಗೆ ನಡೆಯಲಿದ್ದು, ಈ ವೇಳೆ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿಯ ಎರಡು ಜಿಲ್ಲೆಗಳ ಸಂಘದ ಪ್ರಮುಖರು ಸಂಘ ನಿಕೇತನದಲ್ಲಿ ಸಭೆ ನಡೆಸಿ ಪ್ರತಿಭಟನೆಯ ಪೂರ್ವಸಿದ್ಧತೆಗಳನ್ನು ನಡೆಸಿದ್ದಾರೆ.
ಪ್ರಸ್ತುತ ಸ್ಥಿತಿಗೆ ಸರಕಾರವೇ ನೇರ ಹೊಣೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿರುವ ಮುಖ್ಯಮಂತ್ರಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅಮಾಯಕ ಪ್ರಶಾಂತ್ ಪೂಜಾರಿ ಮತ್ತು ಕುಟ್ಟಪ್ಪ ಅವರ ಬಲಿದಾನವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.


