ಉಳ್ಳಾಲ : ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ HIF-INDIA ವತಿಯಿಂದ ಹಮ್ಮಿಕೊಳ್ಳಲಾಗಿರುವ ಮಹತ್ವಾಕಾಂಕ್ಷಿ ಯೋಜನೆ ಪ್ರಾಜೆಕ್ಟ್ ಬೂಂದ್ ಅಡಿಯಲ್ಲಿ 28ನೇ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಮಂಗಳವಾರ ತೊಕ್ಕೊಟ್ಟಿನ ಅಲ್ ಮಸ್ಟಿದುಲ್ ಹಿದಾಯಾ ಮತ್ತು ಮದರಸದಲ್ಲಿ ಉದ್ಘಾಟಿಸಲಾಯಿತು.

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿ ಅಲೂಫ್ ಅಹ್ಮದ್ ಅವರ ಸ್ಮರಣಾರ್ಥ ಈ ಘಟಕವನ್ನು ಸದಖಾ ಜಾರಿಯಾ (ನಿರಂತರ ಪುಣ್ಯ ಲಭಿಸುವ ದಾನ) ರೂಪದಲ್ಲಿ ಸಮರ್ಪಿಸಲಾಯಿತು.

ಈ ಯೋಜನೆಯು ಸಾರ್ವಜನಿಕರಿಗೆ ದೀರ್ಘಕಾಲದ ಪ್ರಯೋಜನ ಒದಗಿಸುವುದರ ಜೊತೆಗೆ ಅಗಲಿದ ಆತ್ಮಕ್ಕೆ ನಿರಂತರ ಪುಣ್ಯ ದೊರೆಯುವ ಸತ್ಕಾರ್ಯವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ HIF ಅಧ್ಯಕ್ಷ ರಿಝಾನ್ ಪಾಂಡೇಶ್ವರ್ ಅವರು ಸಾರ್ವಜನಿಕರಿಗೆ ಕುಡಿಯುವ ನೀರನ್ನುಒದಗಿಸುವ ಮಹತ್ವವನ್ನು ವಿವರಿಸಿ, ಇಂತಹ ಸೇವಾ ಕಾರ್ಯಗಳು ಸದಖಾ ಜಾರಿಯಾದ ಅತ್ಯುತ್ತಮ ರೂಪಗಳಾಗಿವೆ ಎಂದುಹೇಳಿದರು.
ಇದೇ ಸಂದರ್ಭದಲ್ಲಿ ಅಲೂಫ್ ಅಹ್ಮದ್ ಅವರನ್ನು ಸ್ಮರಿಸಿದ ಅವರು, ಆತ ಪ್ರತಿಭಾವಂತ ಹಾಗೂ ಭರವಸೆಯ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅವರ ಅಕಾಲಿಕ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ HIF ಸದಸ್ಯರಾದ ನವಾಝ್ ಮತ್ತು ಉಮರ್ ಅಹ್ಮದ್, ಮರ್ಹೂಂ ಅಲೂಫ್ ಅಹ್ಮದ್ ಅವರ ತಂದೆ ಅಹ್ಮದ್ ಸನಾವುಲ್ಲಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ಸಅದಿ, ಮಸೀದಿಯ ಅಧ್ಯಕ್ಷ ಅಬ್ದುಲ್ ಲತೀಫ್, ಅಬ್ದುಲ್ ಗಫೂರ್, ತೊಕ್ಕೊಟ್ಟಿನ ಹಾಜಿ ಇದಿನಬ್ಬ ನೌಶಾದ್ ಮೆಟ್ರೋ ಹಾಗೂ ಅಶ್ರಫ್ ಐವರಿ ಉಪಸ್ಥಿತರಿದ್ದರು.
28ನೇ ಘಟಕದ ಉದ್ಘಾಟನೆಯೊಂದಿಗೆ ಪ್ರಾಜೆಕ್ಟ್ ಬೂಂದ್ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಸಾರ್ವಜನಿಕರ ಕಲ್ಯಾಣಕ್ಕಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ HIF-INDIA ಸಂಸ್ಥೆಯ ಬದ್ಧತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
ಸಮಾಜದ ಹಿತದೃಷ್ಟಿಯಿಂದ ಇಂತಹ ಜನಪರ ಸೇವಾ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು HIF-INDIA ಪುನರುಚ್ಚರಿಸಿದೆ.

