ಬಂಟ್ವಾಳ, ನ.25 : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಮಂಗಳವಾರ ನಡೆದ ಮಾತಿನ ಚಕಮಕಿಯ ವೇಳೆ ಯುವತಿಯೊಬ್ಬಳು ತನ್ನ ಸ್ವಂತ ದೊಡ್ಡಪ್ಪನನ್ನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ನವೆಂಬರ್ 24ರಂದು ರಾತ್ರಿ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ. ಸುಮಾರು 45 ರಿಂದ 50 ವರ್ಷ ವಯಸ್ಸಿನ ಚೆನ್ನಯ್ಯ ಪೂಜಾರಿ ಎಂಬುವವರು ತಮ್ಮ ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಯುವತಿ ಚೆನ್ನಯ್ಯ ಪೂಜಾರಿ ಅವರಿಗೆ ಹರಿತವಾದ ಆಯುಧದಿಂದ ಇರಿದಿದ್ದಾಳೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

