ಉಳ್ಳಾಲ: ಯೆನೆಪೋಯ ವೈದ್ಯಕೀಯ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರೀಯ ಸಮ್ಮೇಳನ ‘ಯೆನ್ಸಿಷನ್ 2026’ ನ.20ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ್ ಸಾಲ್ಡಾನ ತಿಳಿಸಿದರು.

ತೊಕ್ಕೊಟ್ಟು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆನೆಪೋಯ ವೈದ್ಯಕೀಯ ಕಾಲೇಜಿನ ಸರ್ಜರಿ ಕ್ಲಬ್ ‘ಬ್ಲೇಡ್ಸ್ ಆ್ಯಂಡ್ ಬಿಯಾಂಡ್’ ವತಿಯಿಂದ ಸಮ್ಮೇಳನ ಆಯೋಜಿಸಲಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ, ಸಂಶೋಧನೆ, ಶೈಕ್ಷಣಿಕ ಚಟುವಟಿಕೆ ಹಾಗೂ ನಾವೀನ್ಯತೆಗಳ ಕುರಿತು ಜ್ಞಾನ ಮತ್ತು ಅನುಭವ ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದರು.

2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಎರಡು ದಿನಗಳ ಕಾಲ 250ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಮೊದಲ ಆವೃತ್ತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗಿದ್ದು, ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ 20 ಕಾರ್ಯಾಗಾರಗಳು, ಮೂರು ಮಾಸ್ಟರ್ಕ್ಲಾಸ್ಗಳು, ವೈಜ್ಞಾನಿಕ ಸ್ಪರ್ಧೆಗಳು, ಬಹುಹಂತದ ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆಗಳು ನಡೆಯಲಿವೆ. ಸಂಶೋಧನಾ ಕ್ಲಬ್ ‘ಜೆನೆಸಿಸ್’ ವತಿಯಿಂದ ಐಡಿಯಾಥಾನ್ ಹಾಗೂ ವಿಶೇಷ ಎಸ್ಕೇಪ್ ರೂಮ್ ಈ ಬಾರಿಯ ವಿಶೇಷ ಆಕರ್ಷಣೆಗಳಾಗಿವೆ ಎಂದು ವಿವರಿಸಿದರು.

ನ.20ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಖ್ಯಾತ ಉಪನ್ಯಾಸಕ ಡಾ. ಅಬ್ಬಾಸ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾರೋ ಮತ್ತು ಮೆಡ್ಪಿಜಿ ಸೇರಿದಂತೆ ಪ್ರಮುಖ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷಾ ತರಬೇತಿ ವೇದಿಕೆಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಮೂಳೆಚಿಕಿತ್ಸೆಯ ಬೋಧನಾ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಬಳಿಕ ಡಾ. ಅಬ್ಬಾಸ್ ಅಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಶೈಕ್ಷಣಿಕ ಚಟುವಟಿಕೆ, ಪ್ರಾಯೋಗಿಕ ತರಬೇತಿ, ಸಂಶೋಧನೆ, ಸ್ಪರ್ಧೆ ಹಾಗೂ ನಾವೀನ್ಯತೆಗಳ ಸಮಾಗಮವಾಗಿರುವ ‘ಯೆನ್ಸಿಷನ್ 2026’ ಭವಿಷ್ಯದ ವೈದ್ಯರಿಗೆ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅನುಭವ ಹಾಗೂ ಜ್ಞಾನಾರ್ಜನೆಗೆ ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಹರಿಶ್ಚಂದ್ರ ಬಿ., ಯೆನ್ಸಿಷನ್ 2026ರ ಸಂಘಟನಾ ಅಧ್ಯಕ್ಷೆ ಆಯೆಷಾ ರಿದಾ, ಸಂಘಟನಾ ಕಾರ್ಯದರ್ಶಿ ಸೋಮ್ಯ ಸಕ್ಸೇನಾ, ಇಶಾನ್ ಗಿನೋಡಿಯಾ ಹಾಗೂ ಸ್ಮೇರಾ ರಾಜೇಶ್ ಉಪಸ್ಥಿತರಿದ್ದರು.

