ಮಂಗಳೂರು: ನಗರದ ಮಣ್ಣಗುಡ್ಡದಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜು ಆವರಣದಲ್ಲಿದ್ದ ಶತಮಾನದಷ್ಟು ಹಳೆಯ ಸೂಟರ್ ಹಾಸ್ಟೆಲ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದ ಈ ಐತಿಹಾಸಿಕ ಕಟ್ಟಡ ಇದೀಗ ಕಲ್ಲು ಮತ್ತು ಕಟ್ಟಡದ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಹಾಸ್ಟೆಲ್, ಮಂಗಳೂರಿನ ಶೈಕ್ಷಣಿಕ ಹಾಗೂ ಸಾಮಾಜಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿತ್ತು. 1970ರ ದಶಕದಲ್ಲೇ ಹಾಸ್ಟೆಲ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರೂ, ಹಳೆಯ ಕಾಲದ ವಾಸ್ತುಶಿಲ್ಪ ಮತ್ತು ಇತಿಹಾಸದ ನೆನಪುಗಳನ್ನು ಹೊತ್ತು ಕಟ್ಟಡ ಇಷ್ಟು ವರ್ಷಗಳ ಕಾಲ ಉಳಿದುಕೊಂಡಿತ್ತು.
ಕುಂದಾಪುರದಿಂದ, ಕಾಸರಗೋಡು, ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಿಂದ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿಗೆ ಬರುತ್ತಿದ್ದ ಬಿಲ್ಲವ ಸಮುದಾಯದ ಯುವಕರಿಗೆ ವಸತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಹಾಸ್ಟೆಲ್ ನಿರ್ಮಿಸಲಾಗಿತ್ತು. 1926ರಲ್ಲಿ ಸೂಟರ್ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಸತಿಗೃಹವು ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿತ್ತು. ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ ನೆಲೆ ಕಲ್ಪಿಸುವುದರ ಜೊತೆಗೆ ಅವರ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನೂ ಒದಗಿಸಿತ್ತು.ಕಾರ್ಯಾಚರಣೆ ಸ್ಥಗಿತಗೊಂಡ ಬಳಿಕವೂ ಹಲವು ದಶಕಗಳ ಕಾಲ ಅಸ್ತಿತ್ವದಲ್ಲಿದ್ದ ಈ ಕಟ್ಟಡವನ್ನು ಐತಿಹಾಸಿಕ ಪರಂಪರೆಯ ತಾಣವಾಗಿ ಉಳಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಂಗಳೂರಿನ ಶಿಕ್ಷಣ, ಸಮಾಜ ಮತ್ತು ಸಾಂಸ್ಕೃತಿಕ ಇತಿಹಾಸದೊಂದಿಗೆ ನಂಟು ಹೊಂದಿದ್ದ ಸೂಟರ್ ಹಾಸ್ಟೆಲ್ ಇದೀಗ ನೆಲಸಮಗೊಂಡಿದ್ದು, ಹಳೆಯ ತಲೆಮಾರಿನ ನೆನಪುಗಳೊಂದಿಗೆ ಈ ಕಟ್ಟಡವೂ ಇತಿಹಾಸದ ಪುಟ ಸೇರಿದೆ.

