ಕೊಣಾಜೆ; ತುಳುನಾಡಿನಲ್ಲಿ ಸಾಮಾನ್ಯಳಾಗಿದ್ದು, ಪೋರ್ಚುಗೀಸರನ್ನು ಸದೆಬಡಿದ ಅಬ್ಬಕ್ಕನನ್ನು ದೇಶದ ಇತಿಹಾಸ ಮರೆಯುವಂತಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನ ಶೌರ್ಯವನ್ನು ಮೆರೆದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂತಹ ಹೆಣ್ಣು ಮಗಳ ಹೆಸರು ಅಜರಾಮರ ಎಂದು ವಿಶ್ವಮಂಗಳ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಜಗದೀಶ್ ಪ್ರಸಾದ್ ಡಿ. ನುಡಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಪೀಠದ ವತಿಯಿಂದ, ವಿಶ್ವಮಂಗಳ ಪ್ರೌಢ ಶಾಲೆ, ಕೊಣಾಜೆ ಇದರ ಸಹಯೋಗದಲ್ಲಿ ಶನಿವಾರ ನಡೆದ ‘ತುಳುವೆರೆ ನೆಂಪುಡು ರಾಣಿ ಅಬ್ಬಕ್ಕ’ ಎಂಬ ಉಪನ್ಯಾಸ, ರಸಪ್ರಶ್ನೆ, ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ, ಕರಾವಳಿಯ ಸಮೃದ್ಧ ಪ್ರದೇಶದ ಮೇಲೆ ಪೋರ್ಚುಗೀಸರು ಅಧಿಕಾರ ಸಾಧಿಸಲು ಹೊರಟಾಗ, ಈ ಮಣ್ಣಿನ ಮಗಳು ಹೋರಾಡಿದ್ದು ತುಳುನಾಡಿನ ಮಹಿಳೆಯರು ಧೈರ್ಯಶಾಲಿಗಳು ಎಂಬುದನ್ನು ನೆನಪಿಸುತ್ತದೆ. ರಾಣಿ ಎಂದಾಗ ನಮ್ಮ ಮನಸ್ಸಿಗೆ ಬರುವ ಕಲ್ಪನೆಯ ಹಾಗೆ ಅಬ್ಬಕ್ಕ ಇರಲಿಲ್ಲ, ಕೃಷಿಯ ಕೆಲಸಗಳನ್ನು ಮಾಡುತ್ತಾ ಸಾಮಾನ್ಯಳಾಗಿದ್ದು, ಶತ್ರುಗಳನ್ನು ಧೈರ್ಯದಿಂದ ಎದುರಿಸಿದವಳು ಎಂದರು.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕರಾದ ಡಾ. ಯಶುಕುಮಾರ್ ಡಿ. ಅವರು ಮಾತನಾಡಿ, ಸ್ಥಳೀಯ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ನಮ್ಮ ಭವಿಷ್ಯದ ದಾರಿಯನ್ನು ಸ್ಪಷ್ಟಗೊಳಿಸುತ್ತದೆ. ತುಳುನಾಡಿನ ಇತಿಹಾಸದ ಕುರಿತ ತಿಳುವಳಿಕೆ ನಮಗೆ ಅತ್ಯಂತ ಅಗತ್ಯ. ರಾಣಿ ಅಬ್ಬಕ್ಕಳ ಬದುಕು ತುಳುನಾಡಿನ ನಾವು ಎಂತಹ ಸ್ವಾಭಿಮಾನಿಗಳು ಎಂಬುದನ್ನು ತೋರಿಸುತ್ತದೆ ಎಂದು ಅಬ್ಬಕ್ಕನ ಧೈರ್ಯಶಾಲಿ ಸಾಹಸವನ್ನು ವಿವರಿಸಿದರು.
ನಂತರ ರಾಣಿ ಅಬ್ಬಕ್ಕನ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕೊನೆಗೆ ಶಾಲೆಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಮಹಾಕವಿ ರತ್ನಾಕರವರ್ಣಿ ಪೀಠದ ಸಂಶೋಧನಾ ಸಹಾಯಕರಾದ ಪ್ರಸಾದ್ ಅವರು ನಡೆಸಿಕೊಟ್ಟರು.
ಶಾಲೆಯ ಮುಖ್ಯಶಿಕ್ಷಕರಾದ ಪ್ರಿಯಾ ಎನ್. ವಂದಿಸಿದರು. ತುಳು ಪೀಠದ ಸಂಶೋಧನಾ ಸಹಾಯಕರಾದ ಪ್ರಸಾದ್ ಅಂಚನ್ ನಿರೂಪಿಸಿದರು.

