ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಸಾಮೂಹಿಕ ಗೋಪೂಜೆ
ಉಳ್ಳಾಲ, ನ.09: ಗೋಸಾಕಣೆಯಿಂದ ಜನರು ವಿಮುಖರಾಗುತ್ತಿರುವ ಪರಿಣಾಮ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗೋಸಾಕಣೆಯತ್ತ ಒಲವು ತೋರುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಗೋವಿನ ಸಂತತಿಯೇ ನಶಿಸಿ, ಮುಂದಿನ ಪೀಳಿಗೆಯ ಮಕ್ಕಳು ಗೋವು ಎಂದರೆ ಏನು ಎಂದು ಕೇಳುವ ಪರಿಸ್ಥಿತಿ ಎದುರಾಗಬಹುದು ಎಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಹೇಳಿದರು.

ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಕೊಲ್ಯದ ನಾರಾಯಣ ಸಫಲ್ಯ ಅವರ ಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಗೋಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ನಮ್ಮ ಕುಟುಂಬ ದನದ ಹಾಲನ್ನು ಮಾರಿ ಜೀವನ ಸಾಗಿಸಿದ ಕೃಷಿಕ ಕುಟುಂಬವಾಗಿದೆ. ನಮ್ಮ ಬದುಕಿಗೆ ಆಸರೆಯಾಗಿರುವ ಗೋಮಾತೆಯನ್ನು ದೀಪಾವಳಿ ಹಬ್ಬದ ಗೋಪೂಜೆಯ ಸಂದರ್ಭದಲ್ಲಾದರೂ ಭಕ್ತಿ, ಶ್ರದ್ಧೆಯಿಂದ ಪೂಜಿಸಿ ಗೌರವಿಸುವ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮುಂದುವರಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸದಸ್ಯೆ ದೇವಕಿ ಉಳ್ಳಾಲ್, ಇಂದಿನ ದಿನಗಳಲ್ಲಿ ಜನರು ಗೋಸಾಕಣೆಯಿಂದ ವಿಮುಖರಾಗುತ್ತಿದ್ದಾರೆ. ಗೋವುಗಳನ್ನು ಸಾಕಲು ಎಷ್ಟು ಕಷ್ಟವಿದೆ ಎಂಬುದು ನನ್ನಂತಹ ಹೈನುಗಾರರಿಗೆ ಮಾತ್ರ ತಿಳಿದಿದೆ. ಗೋವು ಮನೆಯ ಯಜಮಾನನಿದ್ದಂತೆ. ಗೋವಿನಿಂದಲೇ ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಗೋಮಾತೆಯನ್ನು ನಾವು ಎಷ್ಟು ಸಂತುಷ್ಟಗೊಳಿಸುತ್ತೇವೆಯೋ ಅದರ ಇಮ್ಮಡಿಯಷ್ಟು ಅದು ನಮ್ಮನ್ನು ಹರಸಿ ಆಶೀರ್ವದಿಸುತ್ತದೆ. ಗೋವನ್ನು ಸಾಕಲು ಕಷ್ಟವಾದರೆ ಮಾರಾಟ ಮಾಡುವ ಬದಲು ಗೋಪ್ರೇಮಿಗಳಿಗೆ ದಾನ ಮಾಡುವುದು ಶ್ರೇಷ್ಠ ಸಂಪ್ರದಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಡ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ಉಪಾಧ್ಯಕ್ಷ ಪ್ರಕಾಶ್ ಕುಂಪಲ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಚಂಚಲಾಕ್ಷಿ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ದೇವಕಿ ಉಳ್ಳಾಲ್, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷೆ ಸಪ್ನಾ ಹರೀಶ್, ಕೋಟೆಕಾರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯೆ ಸಫಿಯ, ಸೋಮೇಶ್ವರ ಪುರಸಭೆ ನಾಮನಿರ್ದೇಶಿತ ಸದಸ್ಯ ಪ್ರೇಮ್ ಕೊಲ್ಯ, ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಯು.ಟಿ. ಫರೀದ್, ಉದ್ಯಮಿ ಪ್ರಶಾಂತ್ ಮತ್ತು ಪೂರ್ಣಿಮಾ ದಂಪತಿ, ಸೋಮೇಶ್ವರ ಪುರಸಭೆ ವಿಪಕ್ಷ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರು, ಕೃಷಿಕ ನಾರಾಯಣ ಸಫಲ್ಯ, ಪವನ್ ರಾಜ್ ಕೊಲ್ಯ, ರಾಜ ಬಂಡಸಾಲೆ, ಮೂಗಪ್ಪ, ರೂಪೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

