ಕೊಣಾಜೆ: ಇತ್ತೀಚೆಗೆ ಹಬ್ಬಗಳನ್ನು ಪಾಶ್ಚಾತ್ಯ ಸಂಸ್ಕ್ರತಿಯಂತೆ ವೈಶಿಷ್ಟ್ಯವಾಗಿ ಆಚರಿಸುವುದನ್ನು ಕಾಣುತ್ತೇವೆ. ಆದರೆ ನಮ್ಮ ನಾಡಿನ ಆಯಾ ಹಬ್ಬಗಳು ನಮ್ಮ ಬದುಕಿಗೆ ಪೂರಕವಾಗಿ ಅನೇಕ ಮಹತ್ವತೆಗಳನ್ನು ಒಳಗೊಂಡಿರುತ್ತದೆ. ನಮ್ಮ ಸಂಸ್ಕೃತಿಯ ಜೀವಂತಿಕೆಯನ್ನು ಉಳಿಸಿಕೊಳ್ಳಬೇಕಾದರೆ ಹಬ್ಬಗಳನ್ನು ನಾವು ಸಂಪ್ರದಾಯಬದ್ದವಾಗಿ ಅಚರಿಸುವಂತಾಗಬೇಕು. ಹಬ್ಬಗಳ ಮಹತ್ವ, ಒಳಾರ್ಥವನ್ನು ಮಕ್ಕಳಿಗೆ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಹಿರಿಯರಿಂದ ಮತ್ತು ಸಂಘಟನೆಗಳಿಂದ ಆಗಬೇಕಿದೆ ಎಂದು ಉಡುಪಿ ಅಜ್ಜರಕಾಡು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ನವೀನ್ ಕೊಣಾಜೆ ಅವರು ಹೇಳಿದರು.

ಅವರು ಪಜೀರು ಸುದರ್ಶನ ನಗರದ ಸರ್ವೋದಯ ಯುವಕ ಮಂಡಲದ 60 ನೇ ವರ್ಷದ ಸಂಭ್ರಮಾಚರಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಭಾನುವಾರ ನಡೆದ ಬೆಳಕಿನ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕಾರ್ಯವನ್ನು ಸಂಘಟಿತರಾಗಿ ನಡೆಸಿದರೆ ಯಶಸ್ಸು ಖಂಡಿತಾ ಸಾಧ್ಯ. ಸರ್ವೋದಯ ಯುವಕಮಂಡಲವು ಅದರ ಹೆಸರಿನ ಹಾಗೆಯೇ ಸಮಾಜದ ಕಟ್ಡಕಡೆಯ ವ್ಯಕ್ತಿಯವರೆಗೂ ತಲುಪಿ ಸೇವಾ ಕೈಂಕರ್ಯವನ್ನು ಮುನ್ನಡೆಸಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪಜೀರು ಗೋವನಿತಾಶ್ರಯ ಟ್ರಸ್ಟ್ ನ ಟ್ರಸ್ಟಿ ರವಿ ರೈ ಪಜೀರು ಅವರು,ಜೀವನ ಕತ್ತಲೆಯನ್ನು ದೂರಗೊಳಿಸಿ ಬೆಳಕಿನೆಡೆಗೆ ಹಾಗೂ ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಹಬ್ಬ ಈ ದೀಪಾವಳಿ. ಸರ್ವೋದಯ ಯುವಕ ಮಂಡಲವು ಅನೇಕ ರೀತಿಯ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯವನ್ನು ಕಳೆದ 60 ವರ್ಷದಿಂದ ನಿರಂತರವಾಗಿ ಮಾಡುತ್ತಾ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದರು.
ಯುವಕ ಮಂಡಲದ ಅಧ್ಯಕ್ಷರಾದ ಲೋಹಿತ್ ಪಜೀರು ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪರಸ್ಪರ ನಂಬಿಕೆ, ವಿಶ್ವಾಸ, ಸಹಕಾರದಿಂದ ನಾವು ಸಂಘಟಿತರಾಗಿ ಮುನ್ನಡೆಯುತ್ತಾ ಬಂದಿರುವ ಸರ್ವೋದಯ ಯುವಕ ಮಂಡಲವು ಅನೇಕ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಾಸಾರಥಿ ತೋನ್ಸೆ ಪುಷ್ಕಲ್ ಕುಮಾರ್, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಯಶೋಧರ ಜೋಗಿಬೆಟ್ಟು, ಯುವ ಉದ್ಯಮಿ ಸುಜೀತ್ ಜೆ ಶೆಟ್ಟಿ, ತುಳಸಿ ಮಾತೃ ಮಂಡಳಿಯ ಅಧ್ಯಕ್ಷರಾದ ಸುಮತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಯಶೋಧರ ಜೋಗಿಬೆಟ್ಟು, ಯುವ ಉದ್ಯಮಿ ಸುಜೀತ್ ಜೆ ಶೆಟ್ಟಿ, ತುಳಸಿ ಮಾತೃ ಮಂಡಳಿಯ ಅಧ್ಯಕ್ಷರಾದ ಸುಮತಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಲಿಲ್ಲಿ ಅಪೋಸ್ ಅವರಿಗೆ ಗುರುವಂದನೆ ಹಾಗೂ ಮಂಗಳೂರು ವಿವಿಯ ನಿವೃತ್ತ ಉದ್ಯೋಗಿ ತಾರನಾಥ ವರ್ಮ ಅವರಿಗೆ ಕ್ರೀಡಾ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀ ಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ವಿಜೇತ್ ಪಜೀರು ಅವರು ಸ್ವಾಗತಿಸಿದರು. ನಿತಿನ್ ಪಜೀರು ಅವರು ವಂದಿಸಿದರು.
ಸರ್ವೋದಯ ಯುವಕ ಮಂಡಲದ ಮಾಜಿ ಅಧ್ಯಕ್ಣರಾದ ನಿರ್ಮಲ್ ಭಟ್ ಅವರು ನಿರೂಪಿಸಿದರು. ಬಳಿಕ ಕಲಾಸಾರಥಿ ತೋನ್ಸೆ ಪುಷ್ಕಲ್ ಕುಮಾರ್ ಅವರಿಂದ ನಗೆಹೊನಲು ಕಾರ್ಯಕ್ರಮ ನಡೆಯಿತು.

