ಬೆಂಗಳೂರು, ಅಕ್ಟೋಬರ್ 28: ಕಿಡ್ನಿ ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್ನ್ಯೂಸ್ ನೀಡಿದ್ದು, ಡಯಾಲಿಸಿಸ್ ಸೇವೆ ಬಲಪಡಿಸಲು ರಾಜ್ಯ ಸರ್ಕಾರ ಮಹತ್ವ ಪ್ಲ್ಯಾನ್ ಮಾಡಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಡಯಾಲಿಸಿಸ್ ಸೇವೆ ಒದಗಿಸಲು ಸಿದ್ಧತೆ ನಡೆದಿದ್ದು, ಡಯಾಲಿಸಿಸ್ ಸೇವೆಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಉತ್ತಮ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸಿ ಕಿಡ್ನಿ ರೋಗಿಗಳಿಗೆ ನೆರವಿಗೆ ಮುಂದಾಗಿದೆ.

750 ನೂತನ ಆ್ಯಂಬುಲೆನ್ಸ್
ಅತ್ಯುತ್ತಮ ಗುಣಮಟ್ಟದ 750 ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆಗೂ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೇ ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಗಳಿಗೆ ಕೇವಲ 20 ನಿಮೀಷದಲ್ಲಿ ಆ್ಯಂಬುಲೆನ್ಸ್ ತಲುಪಬೇಕೆಂಬ ಗುರಿ ಹೊಂದಿದ್ದೇವೆ. ಇಲ್ಲವಾದಲ್ಲಿ 3 ಸಾವಿರ ರೂ. ದಂಡ ವಿಧಿಸುತ್ತೇವೆ. ಪ್ರತಿ ತಾಲೂಕಾಸ್ಪತ್ರೆಗಳಲ್ಲಿಯೂ ಐದು ಐಸಿಯು ಬೆಡ್ಗಳನ್ನು ನಿರ್ಮಿಸುತ್ತಿದ್ದೇವೆ. ಹೆಚ್ಚು ಹೆಚ್ಚು ಆಸ್ಪತ್ರೆಗಳ ಬದಲು ಇರುವ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಗುರಿಯಾಗಿದೆ ಎಂದವರು ತಿಳಿಸಿದ್ದಾರೆ.
‘ಶೀಘ್ರ ಮಹಿಳಾ ಆರೋಗ್ಯ ನೀತಿ ಜಾರಿ’
ಮಹಿಳಾ ಆರೋಗ್ಯ ನೀತಿಯನ್ನು ಸಹ ಶೀಘ್ರವೇ ಜಾರಿಗೆ ತರುತ್ತೇವೆ. ಅವರ ಆರೋಗ್ಯ ಬಹಳ ಮುಖ್ಯ ಎಂದು ಖಾದರ್ ಹೇಳಿದ್ದಾರೆ. ಮಾಧ್ಯಮಗಳ ಸಹಕಾರದಿಂದ ಕ್ಯಾನ್ಸರ್ ಔಷಧಿ ಕಡಿಮೆ ದರಕ್ಕೆ ಸಿಗುವಂತಾಗಿದೆ. ಜನಸಾಮನ್ಯರ ಆರೋಗ್ಯದ ಕಾಳಜಿ ಕೇಂದ್ರ ಸರ್ಕಾರಕ್ಕೆ ಯಾಕಿಲ್ಲ? ಎಲ್ಲದಕ್ಕೂ ಯಾಕೆ ಸುಪ್ರೀಂ ಕೋಟ್೯ ಹೇಳಬೇಕು? ಮುಂದಿನ ದಿನಗಳಲ್ಲಿಹೆಚ್ಚು ದರ ಇರುವ ಔಷಧಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಕಡಿವಾಣ ಹಾಕಬೇಕು ಎಂದವರು ಆಗ್ರಹಿಸಿದ್ದಾರೆ.

