ಕೊಣಾಜೆ: ಬದಲಾಗುತ್ತಿರುವ ವ್ಯವಹಾರಿಕ ಪರಿಸರಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಹೊಸ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವ ಮನೋಭಾವ ನಮ್ಮದಾಗಬೇಕು ಎಂದು ಮಂಗಳೂರಿನ ಕೆಸಿಸಿಐ ಇದರ ಅಧ್ಯಕ್ಷರಾದ ದಿವಾಕರ್ ಕೊಚಿಕಾರ್ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ವತಯಿಂದ ನಡೆದ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನ, ನಾಯಕತ್ವ ಗುಣಗಳು, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಶೈಕ್ಷಣಿಕ, ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ವಾಣಿಜ್ಯ ವಿಭಾಗದ ಅಧ್ಯಕ್ಷರಾದ ಡಾ. ಈಶ್ವರ ಪಿ. ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಪ್ರಸ್ತುತ ಕೈಗಾರಿಕಾ ಪ್ರವೃತ್ತಿಗಳು, ಉದಯೋನ್ಮುಖ ಉದ್ಯಮಾವಕಾಶಗಳು ಹಾಗೂ ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ವೈ. ಮುನಿ ರಾಜು, ಡಾ. ವೇದವ ಪಿ., ಡಾ. ಪರಮೇಶ್ವರ ಡಾ. ಪ್ರೀತಿ ಕೀರ್ತಿ ಡಿಸೋಜಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ದಿವಾಕರ್ ಕೊಚಿಕಾರ್ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ಸಂಘದ ಅಧ್ಯಕ್ಷರಾದ ಪುಣ್ಯಮೂರ್ತಿ ಕೆ., ಉಪಾಧ್ಯಕ್ಷರಾದ ಅನುಷಾ ಬಿ. ಎಂ., ಕಾರ್ಯದರ್ಶಿಯಾದ ಪ್ರತೀಕ್ಷಾ, ಜಂಟಿ ಕಾರ್ಯದರ್ಶಿಯಾದ ಶರಣ್ಯ ಹಾಗೂ ಖಜಾಂಚಿಯಾದ ಜಯ ಶಂಭು ಶರ್ಮಾ ಉಪಸ್ಥಿತರಿದ್ದರು.

