ಕೊಣಾಜೆ: ದೈನಂದಿನ ಆಹಾರ ಪದ್ಧತಿಯಲ್ಲಿ ಆಹಾರ ವಿಜ್ಞಾನದ ಮಹತ್ವವನ್ನೂ ಅರಿತುಕೊಳ್ಳಬೇಕಿದೆ. ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯ ಕಾರ್ಯವಿಧಾನದಲ್ಲಿ ಆಹಾರವು ವಹಿಸುವ ಪಾತ್ರವು ಅತ್ಯಂತ ಪ್ರಮುಖವಾದುದು ಎಂದು ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ ಮೈಸೂರಿನ ಮಾಜಿ ನಿರ್ದೇಶಕರಾದ ಪದ್ಮಶ್ರೀ ಪ್ರೊ. ವಿ. ಪ್ರಕಾಶ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಟ್ರೆಂಡಿಸ್ ಫೋರಂನ 33 ನೇ ವಾರ್ಷಿಕ ಸಭೆ ಹಾಗೂ “ಜೀವಶಾಸ್ತ್ರ ಮತ್ತು ವೈದ್ಯಕೀಯದ ಉದಯೋನ್ಮುಖ ಪರಿಕಲ್ಪನೆಗಳು” ವಿಷಯದ ಕುರಿತಾದ ಎರಡು ದಿನಗಳ ಸಮ್ಮೇಳನವನ್ನು ಗುರುವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಕೆಲವು ರೋಗಗಳನ್ನು ನಿರ್ವಹಿಸುವಲ್ಲಿ ಸೂಕ್ತ ಆಹಾರ ಪದ್ಧತಿ ಮತ್ತು ರೋಗನಿರೋಧಕ ವ್ಯವಸ್ಥೆಯ ನಡುವಿನ ಸಂಬಂಧದ ಕುರಿತು ತಿಳಿಯಬೇಕಿದೆ. ಕಾಲಘಟ್ಟವು ಬದಲಾದಂತೆ ಆಹಾರ ಕ್ರಮಗಳಲ್ಲಿಯೂ ಬದಲಾವಣೆಗಳಾಗುತ್ತಿವೆ ಎಂದರು. ಮಂಗಳೂರು ವಿವಿ ಕುಲಸಚಿವರಾದ ಸಂತೋಷ್ ಬಿ ಜಗಲಸಾರ ಅವರು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪ್ರಮುಖ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗೆಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದಕ್ಕೆ ವಿಶ್ವವಿದ್ಯಾನಿಲಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಒದಗಿಸಿ ಕೊಡುತ್ತದೆ. ಈ ರೀತಿಯ ರಾಷ್ಟ್ರೀಯ ಮಟ್ಟದ ಸಮ್ಮೇಳನವು ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವುದರೊಂದಿಗೆ ಜೀವಶಾಸ್ತ್ರ, ರಸಾಯನಶಾಸ್ತ್ರ ಹಾಗೂ ವೈದ್ಯಕೀಯದ ಸಮಕಾಲೀನ ಬೆಳವಣಿಗೆಗಳಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಲು ಸಹಕಾರಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ.ಮಂಜಯ್ಯಅವರು ವಹಿಸಿ ಮಾತನಾಡಿ, ವಿಜ್ಞಾನ , ತಂತ್ರಜ್ಞಾನ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇಂದಿನ ಆಧುನಿಕತೆಯಲ್ಲಿ ಎದುರಾಗುತ್ತಿರುವ ಸವಾಲುಗಳ ನಡುವೆ ಅನೇಕ ಅವಕಾಶಗಳೂ ತೆರೆದುಕೊಳ್ಳುತ್ತಿದ್ದು ಇದಕ್ಕೆ ಇಂತಹ ಸಮ್ಮೇಳನಗಳು ಪೂರಕವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಮಾಜಿ ಡೀನ್ ಪ್ರೊ. ಆನಂದ್ ಕೆ. ಕೊಂಡಪಿ ಅವರು ಟ್ರೆಂಡಿಸ್ ಫೋರಂ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಮಂಗಳೂರು ಮೀನುಗಾರಿಕೆ ಕಾಲೇಜಿನ ಮಾಜಿ ಡೀನ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವಪ್ರಕಾಶ್ ಅವರು ಕರಾವಳಿಯ ಮೀನುಗಾರಿಕೆ ಮತ್ತು ಪೌಷ್ಟಿಕ ಆಹಾರ ವಿಷಯದ ಕುರಿತು ಮಾತನಾಡಿದರು. ಸಮ್ಮೇಳನದ ಸಂಯೋಜಕರು ಹಾಗೂ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಎಸ್. ಮುಸ್ತಕ್ ಅವರು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ.ನರಸಿಂಹಯ್ಯ ಅವರು ವಂದಿಸಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ತಜ್ಞರು ವಯೋಸಹಜ ಬದಲಾವಣೆಗಳು, ನಿರ್ದಿಷ್ಟ ರೋಗಗಳ ಚಿಕಿತ್ಸೆಯಲ್ಲಿ CRISPR ತಂತ್ರಜ್ಞಾನ, ಪ್ರೋಟೀನ್ ಹೋಮಿಯೋಸ್ಟಾಸಿಸ್, ಮಧುಮೇಹ ಸೇರಿದಂತೆ ಜೀವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದ ವಿವಿಧ ಪ್ರಮುಖ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

