ಕೋಟೆಕಾರು: ‘ಸ್ವಚ್ಛತಾ ಹೀ ಸೇವಾ 2026’ ಕಾರ್ಯಕ್ರಮದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಟೋಬರ್ 2ರಂದು ಬೃಹತ್ ಸ್ವಚ್ಛತಾ ಶ್ರಮದಾನ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಮಾಡೂರು ಜಂಕ್ಷನ್ನಿಂದ ನಡಾರು ಮಡ್ಯಾರುವರೆಗೆ ಪ್ರಮುಖ ರಸ್ತೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ರಸ್ತೆ ಬದಿಗಳಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ಕೈಗೊಳ್ಳಲಾಯಿತು.


ಅಭಿಯಾನದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ರಾವ್ ಮಡ್ಯಾರು, ಮುಖ್ಯಾಧಿಕಾರಿ ಮಾಲಿನಿ ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.

ನಿಟ್ಟೆ ನರ್ಸಿಂಗ್ ಕಾಲೇಜಿನ ಎನ್ಎಸ್ಎಸ್ (NSS) ವಿದ್ಯಾರ್ಥಿಗಳು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ನಡೆಸಿದರು. ಸ್ವಚ್ಛ ಪರಿಸರ ನಿರ್ಮಾಣದ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.




