ಮಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೇರಳ ಸೇರಿದಂತೆ ಇತರ ರಾಜ್ಯಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ನಡುವೆಯೇ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ ಮತ್ತು ಮಂಗಳೂರು ಭಾಗದ ಬಡ ರೋಗಿಗಳಿಗೆ ಐಸಿಯು ಸೌಲಭ್ಯ ಸಿಗದೆ ಪರದಾಡುವ ಪರಿಸ್ಥಿತಿ ಇದೆ ಎಂಬ ಪ್ರಶ್ನೆ ಸಾಮಾಜಿಕ ಕಾರ್ಯಕರ್ತರಿಂದ ಕೇಳಿಬಂದಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಸಂಜೀವ್ ಅವರು ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ವೆನ್ಲಾಕ್ನಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದ ಕೇರಳದ ಒಳರೋಗಿ ಮತ್ತು ಹೊರರೋಗಿಗಳ ಸಂಖ್ಯೆ, ವಿಳಾಸ, ಒಟ್ಟು ಅಂಕಿ-ಅಂಶ ಹಾಗೂ ಚಿಕಿತ್ಸೆಗೆ ತಗಲಿದ ಅಂದಾಜು ವೆಚ್ಚದ ವಿವರಗಳನ್ನು ಕೇಳಿದ್ದರು. ವೆನ್ಲಾಕ್ ಆರೋಗ್ಯ ರಕ್ಷಾ ಸಮಿತಿಗೆ ಕೇರಳ ಸರ್ಕಾರದಿಂದ ಹಣಕಾಸು ಸಹಕಾರ ದೊರೆತಿದೆಯೇ ಎಂಬ ಮಾಹಿತಿಯನ್ನೂ ಕೋರಲಾಗಿತ್ತು.
ಈ ಅರ್ಜಿಗೆ ಸಂಬಂಧಿಸಿ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ, ಮಂಗಳೂರು ಅವರು ವೆನ್ಲಾಕ್/ಜಿಎನ್ಎಲ್/ಮಾಹಿ/33/2026-27, ದಿನಾಂಕ 24-09-2026ರ ಪತ್ರದಲ್ಲಿ ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿಯವರ ಅಎ(2)ಮಾಹಿ/30/2026-27, ದಿನಾಂಕ 10-09-2026ರ ಪತ್ರವು 15-09-2026ರಂದು ಕಚೇರಿಗೆ ತಲುಪಿತ್ತು ಎಂದು ತಿಳಿಸಲಾಗಿದೆ.
ಅಧಿಕಾರಿಗಳ ಉತ್ತರದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುವ ಪ್ರಕರಣಗಳು ಅಥವಾ ಇತರ ರಾಜ್ಯಗಳ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿಲ್ಲ. ಹಾಗದರೆ ಹಣ ಪಡೆದು ಚಿಕಿತ್ಸೆ ಕೊಡಲಾಗುತ್ತಿದೆಯೇ ? ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಕೇರಳ ಸರ್ಕಾರದಿಂದ ಯಾವುದೇ ಹಣಕಾಸು ಸಹಕಾರವೂ ದೊರೆತಿಲ್ಲ ಎಂದು ತಿಳಿಸಲಾಗಿದೆ.
ಆದರೆ ಕೇರಳದಿಂದ ಎಷ್ಟು ಮಂದಿ ರೋಗಿಗಳು ವೆನ್ಲಾಕ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅಥವಾ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮೂಲಭೂತ ಮಾಹಿತಿಗೆ ಸ್ಪಷ್ಟ ಉತ್ತರ ನೀಡಲಾಗಿಲ್ಲ. ರೋಗಿಗಳ ಸಂಖ್ಯೆ, ವಿಳಾಸ, ಚಿಕಿತ್ಸಾ ವೆಚ್ಚ ಸೇರಿದಂತೆ ಸಂಬಂಧಿತ ಅಂಕಿ-ಅಂಶ ಅಥವಾ ದಾಖಲೆಗಳನ್ನು ಒದಗಿಸಲಾಗಿಲ್ಲ. ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಇತರ ರಾಜ್ಯಗಳ ರೋಗಿಗಳ ಚಿಕಿತ್ಸೆಯ ಪ್ರಮಾಣ ಮತ್ತು ವೆಚ್ಚವನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.
ಕೇರಳದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದಾದರೆ, ಅವರಿಂದ ಹಣ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಯಾವ ಸರ್ಕಾರಿ ಆದೇಶ ಅಥವಾ ನಿಯಮ ಅನ್ವಯಿಸುತ್ತದೆ? ಎಷ್ಟು ಹಣ ಸಂಗ್ರಹಿಸಲಾಗಿದೆ? ಆ ಹಣ ಯಾವ ಖಾತೆಗೆ ಜಮೆಯಾಗುತ್ತದೆ? ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ.
ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಾಗಿರುವಾಗ, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಬಜೆಟ್ ಮತ್ತು ಸಾರ್ವಜನಿಕ ಸಂಪನ್ಮೂಲಗಳಿಂದ ನಡೆಯುವ ಆಸ್ಪತ್ರೆಯಲ್ಲಿ ಕೇರಳದ ಎಷ್ಟು ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ದಾಖಲೆ ಇಲ್ಲದಿರುವುದು ಏಕೆ? ಎಂಬ ಪ್ರಶ್ನೆಯೂ ಎದುರಾಗಿದೆ. ಕೇರಳದ ಬಡ ರೋಗಿಗಳಿಗೆ ಚಿಕಿತ್ಸೆ ನೀಡಬಾರದು ಎಂಬುದು ಪ್ರಶ್ನೆಯಲ್ಲ; ಆದರೆ ಸರ್ಕಾರಿ ಸಂಪನ್ಮೂಲ ಬಳಕೆಯಾಗುತ್ತಿದ್ದರೆ ಅದರ ಸಂಪೂರ್ಣ ಲೆಕ್ಕ ಮತ್ತು ದಾಖಲೆ ಇರಬೇಕೆಂಬುದು ಸಾಮಾಜಿಕ ಕಾರ್ಯಕರ್ತರ ಆಗ್ರಹವಾಗಿದೆ.
ಇನ್ನೊಂದೆಡೆ, ಸ್ಥಳೀಯ ಬಡ ಕುಟುಂಬಗಳು ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚ ಭರಿಸಲು ಜಮೀನು ಅಥವಾ ಆಸ್ತಿ ಮಾರಾಟ ಮಾಡುವ ಪರಿಸ್ಥಿತಿಯ ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಐಸಿಯು ಸಿಗದೆ ಪರದಾಡುವ ಪರಿಸ್ಥಿತಿ ಏಕೆ? ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಗಿದೆ.
ಆರೋಗ್ಯ ಇಲಾಖೆ ಕಳೆದ ಮೂರು ವರ್ಷಗಳ ಕೇರಳ ಸೇರಿದಂತೆ ಇತರ ರಾಜ್ಯಗಳ ರೋಗಿಗಳ ಸಂಖ್ಯೆ, ಐಸಿಯು ಬಳಕೆ, ಚಿಕಿತ್ಸಾ ವೆಚ್ಚ, ಸಂಗ್ರಹಿಸಲಾದ ಶುಲ್ಕ ಹಾಗೂ ಅನ್ವಯಿಸುವ ಸರ್ಕಾರಿ ಆದೇಶಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಕೇರಳದ ರೋಗಿಗಳ ಸಂಖ್ಯೆ ಎಷ್ಟು? ಚಿಕಿತ್ಸಾ ವೆಚ್ಚ ಎಷ್ಟು? ಹಣವನ್ನು ಯಾರು ಭರಿಸುತ್ತಿದ್ದಾರೆ? ಯಾವ ನಿಯಮದಡಿ ಚಿಕಿತ್ಸೆ ನೀಡಲಾಗುತ್ತಿದೆ?ವೆನ್ಲಾಕ್ ಕುರಿತು ಆರೋಗ್ಯ ಇಲಾಖೆ ದಾಖಲೆ ಸಹಿತ ಸ್ಪಷ್ಟ ಉತ್ತರ ನೀಡಬೇಕಾಗಿದೆ.

