ಪುತ್ತೂರು: ಸಂಪ್ಯದಲ್ಲಿ 2019ರ ಸೆ.3 ರಂದು ಗಣೇಶೋತ್ಸವದ ಪೆಂಡಾಲ್ನಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿದ್ದು, ಇಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟ ಮಾಡಿದೆ. ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಜೊತೆಗೆ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡ ಮೊತ್ತದಲ್ಲಿ ರೂ 5 ಲಕ್ಷ 90 ಸಾವಿರ ವನ್ನು ಕಾರ್ತಿಕ್ ಮೆರ್ಲಾ ತಾಯಿ ಹೇಮಾವತಿಯವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಉಳ್ಳಾಲ ಬೈಲಿನ ಪ್ರೀತೇಶ್ ಶೆಟ್ಟಿ ಹಾಗೂ ಸಂಪ್ಯ ಪೊಲೀಸ್ ಠಾಣೆಯ ಹಿಂಭಾಗದ ನಿವಾಸಿ ಕಿರಣ್ ರೈ ಶಿಕ್ಷೆಗೊಳಗಾದವರು. ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣಕ್ಕೆ ಕುರಿತಂತೆ ಪೊಲೀಸರು ಆರೋಪಿ ಪ್ರೀತೇಶ್ (ಎ1) ಸಹೋದರರಾದ ಚರಣ್ ರಾಜ್ (ಎ2) ಹಾಗೂ ಕಿರಣ್ (ಎ3) ಮತ್ತು ಸ್ಟೀವನ್ ಮೊಂತೇರೊ (ಎ4) ಸೇರಿ ನಾಲ್ವರನ್ನು ಬಂಧನ ಮಾಡಲಾಗಿತ್ತು. ಈ ಪೈಕಿ ಆರೋಪಿ ಪ್ರೀತೇಶ್ ಚೂರಿ ಇರಿದಿದ್ದು, ಚರಣ್ ಹಾಗೂ ಕಿರಣ್ ಕಾರ್ತಿಕ್ ಕೈಯನ್ನು ಹಿಡಿದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸಿದ್ದ ಸ್ಟೀವನ್ ಮೊಂತೇರೊ ಅವರನ್ನು ನ್ಯಾಯಾಲಯವು ಖುಲಾಸೆ ಮಾಡಿತ್ತು. ಈ ಪ್ರಕರಣದ ಎರಡನೇ ಆರೋಪಿ ಚರಣ್ರಾಜ್ ನನ್ನು 2022 ಜೂ.4 ರಂದು ಪೆರ್ಲಂಪಾಡಿಯಲ್ಲಿ ಇನ್ನೊಂದು ತಂಡವು ತಲ್ವಾರ್ನಿಂದ ಹತ್ಯೆ ಮಾಡಿತ್ತು. ಇದೀಗ ಇಬ್ಬರು ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಲಾಗಿದೆ.

