ಉಳ್ಳಾಲ: ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರು ಇಂದು ಶಾಲೆಗೆ ಬಂದ ಕೂಡಲೇ ಮಕ್ಕಳಿಗೆ ಬೋಧಿಸುವ ಬದಲು ಹಾಲು, ಊಟ, ಬಾಳೆಹಣ್ಣಿನ ಲೆಕ್ಕ ನೀಡುವ ಒತ್ತಡಕ್ಕೆ ಒಳಗಾಗಿದ್ದಾರೆ. ಚುನಾವಣೆ ಹಾಗೂ ಡಾಟಾ ಎಂಟ್ರಿ ಸೇರಿದಂತೆ ವಿವಿಧ ಇಲಾಖಾ ಕೆಲಸಗಳನ್ನು ಶಿಕ್ಷಕರೇ ನಿರ್ವಹಿಸುವುದಾದರೆ ಮಕ್ಕಳಿಗೆ ಶಿಕ್ಷಣ ನೀಡುವುದು ಯಾರು ಎಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಎಂ.ಎಚ್. ಮಲಾರ್ ಖೇದ ವ್ಯಕ್ತಪಡಿಸಿದರು.

ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕನಾಗಿ ಸೇವೆಗೆ ಸೇರಿದ ಯುವಕರು ಇಲಾಖೆಯ ನಿರಂತರ ಒತ್ತಡದಿಂದಾಗಿ ನಿವೃತ್ತಿಯಾಗುವ ವೇಳೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಿಂದೆ ಒಂದನೇ ತರಗತಿಯಲ್ಲಿ ಬೋಧಿಸಿದ ಶಿಕ್ಷಕರ ಹೆಸರನ್ನೂ ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಇಂದು ಶಾಲಾ ಬೋಧನೆಗಿಂತ ಇತರ ಕೆಲಸಗಳೇ ಹೆಚ್ಚಾಗಿರುವುದರಿಂದ ಹತ್ತನೇ ತರಗತಿ ಕಲಿಸಿದ ಶಿಕ್ಷಕರ ಮುಖವನ್ನೇ ವಿದ್ಯಾರ್ಥಿಗಳು ಸರಿಯಾಗಿ ನೋಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹಾ ಮಾತನಾಡಿ, ಮನೆಯಲ್ಲಿ ಹೆತ್ತವರು ಜೀವನದ ದಾರಿ ತೋರಿಸಿದರೆ, ಅದರ ನಂತರದ ಸ್ಥಾನ ಶಿಕ್ಷಕರಿಗೆ ಸಲ್ಲುತ್ತದೆ. ಹಳೆಕೋಟೆ ಶಾಲೆಯಲ್ಲಿ ಶುಲ್ಕವಿಲ್ಲದಿದ್ದರೂ ವಿದ್ಯಾರ್ಥಿಗಳು ಟ್ಯೂಷನ್ ಪಡೆಯದೆ ಉತ್ತಮ ಫಲಿತಾಂಶ ಸಾಧಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಗಳ 15 ಶಿಕ್ಷಕರನ್ನು ಗೌರವಿಸಲಾಯಿತು.
ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಲ್ತಾಫ್ ಯು.ಎಚ್., ಇಬ್ರಾಹಿಂ ಎಂ.ಎಚ್., ನಿವೃತ್ತ ಶಿಕ್ಷಕಿ ಅರುಣಾಕ್ಷಿ, ಹಝ್ರತ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸಂಗೀತಾ, ಕಲ್ಲಾಪು ಹಝ್ರತ್ ಸಯ್ಯದ್ ಮದನಿ ಶಾಲೆಯ ಮುಖ್ಯಶಿಕ್ಷಕಿ ನಸೀಮಾ, ಸಯ್ಯದ್ ಮದನಿ ಪ್ರೌಢಶಾಲಾ ಮುಖ್ಯಶಿಕ್ಷಕ ಇಮ್ತಿಯಾಝ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಸೂಲ್ ಖಾನ್, ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಿ.ಎಂ. ರಫೀಕ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಪ್ನಾ ವಂದಿಸಿದರು. ವಿದ್ಯಾರ್ಥಿನಿಯರಾದ ನಾಫಿಯಾ ಕೆ.ಪಿ. ಹಾಗೂ ಝೊಹರಾ ರಿಫಾ ಕಾರ್ಯಕ್ರಮ ನಿರೂಪಿಸಿದರು.

