
ಉಳ್ಳಾಲ: ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈ ಬಾರಿಯ ಗೌರಿಹಬ್ಬವನ್ನು ವಿಭಿನ್ನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಮೊದಲ ಬಾರಿಗೆ ಸಾಮೂಹಿಕವಾಗಿ ಹೆಣ್ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಮೂಗುತ್ತಿ ಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಶ್ರಮವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ೨೬ ಹೆಣ್ಮಕ್ಕಳಿಗೆ ಉಚಿತವಾಗಿ ಹಾಗೂ ೯ ಮಂದಿ ಹೆತ್ತವರೇ ಉತ್ತಮ ದಿನದಂದು ಸಂಪ್ರದಾಯಬದ್ಧವಾಗಿ ಮೂಗುತ್ತಿ ಧಾರಣೆ ನಡೆಸಿದರು.
ದಾನಿಗಳ ಸಹಕಾರದಿಂದ ೨೬ ಮೂಗುತ್ತಿಗಳನ್ನು ಸಂಗ್ರಹಿಸಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಆಶ್ರಮದಲ್ಲಿ ವಾಸಿಸುವ ಹೆಣ್ಮಕ್ಕಳಿಗೆ ಉಚಿತವಾಗಿ ನೀಡಲಾಯಿತು. ವಿಶ್ವಕರ್ಮ ಸಮುದಾಯದವರು ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ ಮೂಗುತ್ತಿ ಧಾರಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಇದೇ ವೇಳೆ ಹಲವರು ತಮ್ಮ ಮಕ್ಕಳಿಗೂ ಸಂಪ್ರದಾಯಬದ್ಧವಾಗಿ ಮೂಗುತ್ತಿ ಧಾರಣೆ ಮಾಡಿಸಿದರು.
ಸಂಸದ ಬ್ರಿಜೇಶ್ ಚೌಟ ಅವರ ಹೆತ್ತವರಾದ ಸೇಸಣ್ಣ ಚೌಟ ಹಾಗೂ ಪುಷ್ಪಾ ಚೌಟ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೇಸಣ್ಣ ಚೌಟ ಮಾತನಾಡಿ, ಹೆಣ್ಮಕ್ಕಳಿಗೆ ಮೂಗುತ್ತಿ ಧಾರಣೆ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹಕಾರಿಯಾಗಿದೆ ಎಂಬ ನಂಬಿಕೆ ಇದೆ. ಸಂಪ್ರದಾಯಬದ್ಧವಾಗಿ ಇಂತಹ ಧಾರಣೆ ನಡೆಯುತ್ತಿರುವುದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವತಿಯಿಂದ ಸಾಮೂಹಿಕವಾಗಿ ಕಾರ್ಯಕ್ರಮ ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುವಂತಾಗಲಿ ಹಾಗೂ ಹೆಣ್ಮಕ್ಕಳ ಬಾಳು ಬೆಳಕಾಗಲಿ ಎಂದು ಹಾರೈಸಿದರು.
ಪುಷ್ಪಾ ಚೌಟ ಮಾತನಾಡಿ, ಹೆಣ್ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮೂಗುತ್ತಿ ಧಾರಣೆಗೆ ಮಹತ್ವವಿದೆ. ಮುಂದಿನ ವರ್ಷಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ದೇವಸ್ಥಾನವು ಹೆಣ್ಮಕ್ಕಳ ಜೀವನಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಮಾತನಾಡಿ, ಚತುರ್ಥಿಯಂದು ದೇವಸ್ಥಾನದಲ್ಲಿ ಸಾವಿರಾರು ಮನೆಗಳಿಗೆ ತೆನೆ ವಿತರಿಸುವ ಕಾರ್ಯಕ್ರಮವೂ ನಡೆಯಲಿದೆ. ದೇವಸ್ಥಾನಕ್ಕಾಗಿಯೇ ವಿಶೇಷವಾಗಿ ಗದ್ದೆಯನ್ನು ಉಳುಮೆ ಮಾಡಿ ತೆನೆ ಬೆಳೆಸಲಾಗುತ್ತಿದ್ದು, ಒಬ್ಬ ದಾನಿಯ ಪ್ರಾಯೋಜಕತ್ವದಲ್ಲಿ ಉಳುಮೆಯಿಂದ ಹಿಡಿದು ತೆನೆ ಬೆಳೆಸುವವರೆಗಿನ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಹೆಣ್ಮಕ್ಕಳಿಗೆ ಮೂಗುತ್ತಿ ಧಾರಣೆ ಮಾಡಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿತ್ತು. ಆರಂಭದಲ್ಲಿ ತಮ್ಮ ಮಕ್ಕಳಿಗೆ ತಾವೇ ತರುವ ಮೂಗುತ್ತಿಗಳಿಂದ ಧಾರಣೆ ಮಾಡಿಸುವ ಕಾರ್ಯಕ್ರಮವೆಂದು ನಿರ್ಧರಿಸಲಾಗಿತ್ತು. ಬಳಿಕ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅವರ ಸಲಹೆಯಂತೆ ದಾನಿಗಳು ಹಾಗೂ ಸಮಿತಿಯವರು ಚರ್ಚಿಸಿ, ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳಿಗೂ ಈ ಅವಕಾಶ ದೊರೆಯಬೇಕು ಎಂಬ ನಿರ್ಧಾರ ಕೈಗೊಂಡರು. ಅದರಂತೆ ಸಂಸದರ ಹೆತ್ತವರು ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಕುತ್ತಾರ್ , ದುರ್ಗಾವಾಹಿನಿ ಮಹಿಳಾ ಮಂಡಲ , ವರಮಹಾಲಕ್ಷ್ಮಿ ಸಮಿತಿ ದುಬೈ ಹಾಗೂ ಹಲವು ದಾನಿಗಳು ಸಹಕರಿಸಿ 35 ಹೆಣ್ಮಕ್ಕಳಿಗೆ ಉಚಿತ ಮೂಗುತ್ತಿ ಧಾರಣೆ ನೆರವೇರಿಸಿದರು ಎಂದು ಹೇಳಿದರು.
ದೇವಸ್ಥಾನದ ವತಿಯಿಂದ ಹಮ್ಮಿಕೊಂಡ ಮೊದಲ ಪ್ರಯತ್ನವೇ ಆಗಿದ್ದರೂ, ಹಲವಾರು ಹೆಣ್ಮಕ್ಕಳ ಆಸೆಯನ್ನು ಈಡೇರಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ದಾನಿಗಳು ಹಾಗೂ ಭಕ್ತರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಉಪಾಧ್ಯಕ್ಷರು ವಾಸುಪೂಜಾರಿ, ಖಜಾಂಚಿ ಜಗನ್ನಾಥ್ ಸಾಲ್ಯಾನ್, ಪ್ರ.ಕಾ ಪುಷ್ಪರಾಜ್, ಸಂಘಟನಾ ಕಾರ್ಯದರ್ಶಿ ಜೆ.ಕೆ ರೈ, ಪ್ರಧಾನ ಅರ್ಚಕ ವಿಜಯ ನಾವಡ, ದಿನೇಶ್ ಗಟ್ಟಿ, ಮಾಧವ ನಾಯ್ಕ್ , ರಾಮಕೃಷ್ಣ ಬಬ್ಬುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ವಿಶ್ವಕರ್ಮ ಸಮುದಾಯದ ನಾಗೇಶ್ ಆಚಾರ್ಯ, ಸುರೇಶ್ ಆಚಾರ್ಯ ಸತೀಶ್ ಆಚಾರ್ಯ, ಯಶೋಧರ ಆಚಾರ್ಯ ಮೂಗುತ್ತಿ ಧಾರಣೆ ನಡೆಸಿಕೊಟ್ಟರು
ಮೂಗುತ್ತಿ ಧರಿಸುವ ಆಸೆಯಿದ್ದರೂ
ಅಸಾಧ್ಯವಾದವರಿಗೆ ಇಂದು ವೇದಿಕೆ ಸಾಧ್ಯವಾಗಿಸಿದೆ : ಧನಲಕ್ಷ್ಮೀ ಗಟ್ಟಿ
ಹಲವಾರು ಹೆಣ್ಮಕ್ಕಳಿಗೆ ಮೂಗುತ್ತಿ ಧರಿಸಿಕೊಳ್ಳುವ ಆಸೆಯಿದ್ದರೂ, ವಿವಿಧ ಕಾರಣಗಳಿಂದಾಗಿ ಅದನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೂಗುತ್ತಿ ಧಾರಣೆ ಎನ್ನುವುದು ಜೀವನದಲ್ಲಿ ಎದುರಾಗುವ ವಿವಿಧ ನೋವುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸುವ ಒಂದು ಸಣ್ಣ ನೋವಿನ ಅನುಭವವೂ ಹೌದು. ವಿಶೇಷವಾಗಿ ಋತುಚಕ್ರದ ಸಂದರ್ಭ ಎದುರಾಗುವ ನೋವುಗಳನ್ನು ಸಹಿಸಿಕೊಳ್ಳುವ ಮಾನಸಿಕ ದೃಢತೆಯನ್ನು ಬೆಳೆಸುವಲ್ಲಿಯೂ ಇದರ ಪಾತ್ರವಿದೆ. ಈ ಕಲ್ಪನೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಟ್ರಸ್ಟ್, ದಾನಿಗಳು ಹಾಗೂ ಗೋಪಾಲ್ ಕುತ್ತಾರ್ ಸೇರಿದಂತೆ ಹಲವರು ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದಾರೆ. ಈ ಸಹಕಾರದ ಮೂಲಕ ಹಲವಾರು ಹೆಣ್ಮಕ್ಕಳ ಬಾಳಿನಲ್ಲಿ ಚೈತನ್ಯ ತುಂಬುವ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಈ ಹೆಣ್ಮಕ್ಕಳು ತಮ್ಮ ಜೀವನದಲ್ಲಿ ಇನ್ನಷ್ಟು ಚಿನ್ನದ ಒಡವೆಗಳನ್ನು ಧರಿಸುವಂತಾಗಬೇಕು, ಅವರ ಬದುಕು ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರಬೇಕು ಎಂಬುದೇ ಈ ಕಾರ್ಯಕ್ರಮದ ಆಶಯ ಎಂದು ಅವರು ಹೇಳಿದರು.
ಸರಳ ಕಾರ್ಯಕ್ರಮದಲ್ಲಿ ಮದುಮಗಳು ಭಾಗಿ
ಸಾಮೂಹಿಕ ಮೂಗುತ್ತಿ ಧಾರಣೆ ಕಾರ್ಯಕ್ರಮದಲ್ಲಿ ಕೊಣಾಜೆ ಪೊಲೀಸ್ ಸಿಬ್ಬಂದಿಯ ಎಳೆಯ ಹರೆಯದ ಪುತ್ರಿ ಹಾಗೂ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮದುಮಗಳು ಸೇರಿದಂತೆ ಹಲವು ಹೆಣ್ಮಕ್ಕಳು ಪಾಲ್ಗೊಂಡರು. ಯಾವುದೇ ಆಡಂಬರವಿಲ್ಲದೆ ಸರಳವಾಗಿ, ಹಿಂದೂ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಸಾಮೂಹಿಕವಾಗಿ ಮೂಗುತ್ತಿ ಧಾರಣೆ ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮದ ವಿಶೇಷತೆಗೆ ಸಾಕ್ಷಿಯಾದರು. ಸಂಪ್ರದಾಯ, ಸಂಸ್ಕೃತಿ ಹಾಗೂ ಸಮಾಜಮುಖಿ ಆಶಯವನ್ನು ಒಗ್ಗೂಡಿಸಿದ ಈ ಕಾರ್ಯಕ್ರಮವು ಭಾಗವಹಿಸಿದ ಹೆಣ್ಮಕ್ಕಳಲ್ಲಿ ಸಂತಸ ಮೂಡಿಸಿತು.

