ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಸಹಕಾರಿ ಸಂಘಗಳು ಹೆಚ್ಚಿದಷ್ಟು ವ್ಯಾವಹಾರಿಕ ಕ್ಷೇತ್ರವೂ ಬೆಳವಣಿಗೆ ಸಾಧ್ಯವಾಗುತ್ತದೆ. ಈ ಮೂಲಕ ಜನರ ಬದುಕು ಕೂಡಾ ಉತ್ತಮವಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಕುಂಪಲ ಅಮೃತನಗರದಲ್ಲಿ ಆರಂಭಗೊಂಡ ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾವಹಾರಿಕ ಕ್ಷೇತ್ರದಲ್ಲಿ ಪೈಪೋಟಿ ಇದ್ದರೆ ಮಾತ್ರ ಬೆಳೆಯಲು ಸಾಧ್ಯ. ಪೈಪೋಟಿ ಇಲ್ಲದಿದ್ದರೆ ತಾವು ಮಾಡಿದ್ದೇ ಸರಿ ಎಂಬ ಭಾವನೆ ಬರುತ್ತದೆ. ಹಾಗಾಗಿ ಸಾಮಾನ್ಯ ಜನರಿಗೂ ವ್ಯವಹಾರ ಮಾಡಲು ಅವಕಾಶ ಲಭಿಸುವಂತೆ ಮಾಡಿದ ಅನುಗ್ರಹ ಸೊಸೈಟಿ ನಿರ್ಮಾಣ ಕಾರ್ಯ ಶ್ಲಾಘನೀಯವಾಗಿದ್ದು ಭವಿಷ್ಯದಲ್ಲಿ ಎಲ್ಲ ಸೊಸೈಟಿಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯಲಿ ಎಂದರು.
ನೂತನ ಕಟ್ಟಡ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ದಕ್ಷಿಣ ಜಿಲ್ಲೆ ಸಹಕಾರಿ ಕಾಶಿಯಾಗಿದ್ದು ಜಿಲ್ಲೆಯ ಸಹಕಾರಿ ರಂಗ ಅದ್ಭುತ ಸಾಧನೆ ಮಾಡಿದ್ದು ಶತಮಾನಗಳ ಇತಿಹಾಸವಿದೆ. ಅನುಗ್ರಹ ರಾಜ್ಯದ ಶ್ರೇಷ್ಠ ಸಹಕಾರಿ ಸಂಘವಾಗಿ ಬೆಳೆಯಲಿ ಎಂದು ಆಶಿಸಿದರು.
ಸಾಲ ಮಾಡಿಯಾದರೂ ತುಪ್ಪದೂಟ ಮಾಡು ಎಂಬುದನ್ನು ವಿದೇಶಿಯರು ಆನುಭವಿಸಿದ ಕಾರಣ ಕೆಲವು ದೇಶಗಳು ದಿವಾಳಿ ಹಂತಕ್ಕೆ ತಲುಪಿದ್ದರು. ಆದರೆ ಭಾರತೀಯರು ಹಾಸಿಗೆ ಇದ್ದಷ್ಟು ಕಾಲು ಚಾಚಿದ ಪರಿಣಾಮ, ಅವರ ಸಹಕಾರಿ ಸಂಘದ ಸಂಪೂರ್ಣ ಕೃಪೆ ಇದ್ದ ಕಾರಣ ಭಾರತೀಯರು ಸ್ವಾವಲಂಬಿ ಬದುಕು ಕಾಣುತ್ತಿದ್ದಾರೆ ಎಂದು ನುಡಿದರು.
ಸಹಕಾರಿ ಸಂಘಗಳು ಪಾರದರ್ಶಕತೆ ಇಟ್ಟುಕೊಂಡಿರಬೇಕು. ಠೇವಣಿ ಇಡುವವರು ಮಾತ್ರ ಶ್ರೇಷ್ಠವಲ್ಲ. ಸಾಲಗಾರರೂ ಶ್ರೇಷ್ಠರೇ. ಹಾಗಾಗಿ ಠೇವಣಿ ಇಟ್ಟವರಾಗಲಿ ಸಾಲಗಾರರಾಗಲಿ ಕಣ್ಣೀರು ಸುರಿಸಲು ಅವಕಾಶ ಕೊಡಬಾರದು ಎಂದು ಹೇಳಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಕಾರ್ಯವಾಹ ಪಿ.ಎಸ್. ಪ್ರಕಾಶ್ ಆಡಳಿತ ಕಛೇರಿ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಯೇನೆಪೋಯ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಫರ್ಹಾದ್ ಯೇನೆಪೋಯ ಗಣಕಯಂತ್ರ ಉದ್ಘಾಟಿಸಿದರು. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕ ಪ್ರಶಾಂತ್ ಮಾರ್ಲ ಕೆ.ಅನುಗ್ರಹ ಯೋಜನೆಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಾಸ್ಕರ ಎಸ್. ಕೋಟ್ಯಾನ್ ಷೇರುಪತ್ರ ವಿತರಿಸಿದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು.
ಪ್ರಥಮ ಠೇವಣಿ ಪತ್ರವನ್ನು ಮಂಗಳಾ ಗೇಟ್ ವೇ ಬಿಲ್ಡರ್ಸ್ನ ಪಾಲುದಾರ ರಾಜಶೇಖರ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್, ಚಲನಚಿತ್ರ ನಟ ಅರ್ಜುನ ಕಾಪಿಕಾಡ್, ಸಹಕಾರ ಸಂಘಗಳ ಉಪ ನಿಬಂಧಕ ಡಿ.ಕೆ. ಸಲೀಂಕೆ. ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ, ತಿರಮಲೇಶ್ವರ ಭಟ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ರಂಜನ್ ಮಿಜಾರ್, ಕೆ. ಕೃಷ್ಣಪ್ಪ ಸಾಲಿಯಾನ್, ಸಂತೋಷ್ ಕುಮಾರ್ ರೈ ಬೋಳಿಯಾರು, ರಾಜೇಶ್ ಉಚ್ಚಿಲ್, ಸದಾಶಿವ ಉಳ್ಳಾಲ್, ವಾಸುದೇವ ರಾವ್, ಭರತ್ ಕುಮಾರ್ ಉಳ್ಳಾಲ್, ಮಯೂರ್ ಉಳ್ಳಾಲ್, ಪದ್ಮನಾಭ ಶೆಟ್ಟಿ ಪೂನಾ, ಡಾ.ಹಾಜಿ.ಕೆ.ಎ. ಮುನೀರ್ ಬಾವ, ಅನೂಪ್ ಕೆ.ಎಂ. ಬೆಂಗಳೂರು, ವಿಜಯ್ ಪಿ.ರಂಗ ಮೈಸೂರು, ಮಾಧವ ಬಗಂಬಿಲ ಹಾಗೂ ಪೀಟರ್ ಮೊಂತೆರೋ ಉಪಸ್ಥಿತರಿದ್ದರು.
ಅನುಗ್ರಹ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೇಶವದಾಸ್ ಬಗಂಬಲ, ಉಪಾಧ್ಯಕ್ಷ ಆನಂದ ಎನ್., ಮುಖ್ಯ ಪ್ರಬಂಧಕ ನಿತಿನ್ರಾಜ್ ಶೆಟ್ಟಿ, ಬಾಲಕೃಷ್ಣ ಭಟ್, ನಾರಾಯಣ ಬೇಕೂರು, ಸುಷ್ಮಾ ಸೀತಾರಾಮ ಶೆಟ್ಟಿ, ಮಾಲತಿ ಕೆ., ಭರತ್, ಸದಾನಂದ ಪೂಜಾರಿ, ವಸಂತ್ ಜೆ. ಉಪಸ್ಥಿತರಿದ್ದರು.


