ದೇರಳಕಟ್ಟೆ: ಕಣಚೂರು ಫಿಸಿಯೋಥೆರಪಿ ಕಾಲೇಜ್ ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ಸ್ ಸಹಯೋಗದಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ ಕಾರ್ಯಕ್ರಮ ಕಣಚೂರು ಡ್ರೋಮ್ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಲೈಡ್ ಆ್ಯಂಡ್ ಫಿಸಿಯೋಥೆರಪಿ ವಿಭಾಗದ ಡೀನ್ಡಾ. ಸಾಯಿಕುಮಾರ್ ಎನ್. ವಿಶ್ವ ಫಿಸಿಯೋಥೆರಪಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನಂತಹ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ನಿಯಮಿತ ದೈಹಿಕ ಚಟುವಟಿಕೆ ಮತ್ತು ವೈಜ್ಞಾನಿಕ ಫಿಸಿಯೋಥೆರಪಿ ಪ್ರಮುಖ ಪಾತ್ರ ವಹಿಸುತ್ತವೆ. ಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ದೈಹಿಕ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಬಳಿಕ ಮಾತನಾಡಿದ ಅವರು ಫಿಸಿಯೋಥೆರಪಿ ಕೇವಲ ಗಾಯ ಅಥವಾ ಕಾಯಿಲೆಯ ನಂತರದ ಚಿಕಿತ್ಸೆಗೆ ಸೀಮಿತವಾಗಿರದೆ, ಕಾಯಿಲೆಗಳ ತಡೆಗಟ್ಟುವಿಕೆ, ದೈಹಿಕ ಸಾಮರ್ಥ್ಯ ಸುಧಾರಣೆ ಮತ್ತು ಪುನರ್ವಸತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಫಿಸಿಯೋಥೆರಪಿ ಕ್ಷೇತ್ರದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕಲಬುರಗಿಯ ಯುನೈಟೆಡ್ ಕಾಲೇಜ್ ಆಫ್ ಫಿಸಿಯೋಥೆರಪಿ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಅಬ್ದುಲ್ ಹಕೀಮ್
“ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ತಡೆ, ನಿರ್ವಹಣೆ ಹಾಗೂ ಪುನರ್ವಸತಿಯಲ್ಲಿ ಫಿಸಿಯೋಥೆರಪಿ ಮತ್ತು ದೈಹಿಕ ಚಟುವಟಿಕೆಯ ಪಾತ್ರ” ಎಂಬ ವಿಷಯದ ಕುರಿತು ಜಾಗೃತಿ ಮಂಡಿಸಲಾಯಿತು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಲಹ ಸಮಿತಿ ಸದಸ್ಯ ಡಾ. ಎಂ. ವೆಂಕಟ್ರಾಯ ಪ್ರಭು, ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೊನಿಸ್, ವೈದ್ಯಕೀಯ ಅಧೀಕ್ಷಕ ಡಾ. ಆಂಜನ್ ಕುಮಾರ್, ಡೀನ್ ಸಹನವಾಝ್ ಮಾಣಿಪ್ಪಾಡಿ, ಆಯುರ್ವೇದ ಕಾಲೇಜ್ ಪ್ರಾಂಶುಪಾಲ ಡಾ. ರಾಜಿವ್ ಕುಮಾರ್, ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲೆ ಡಾ. ಶಮೀಮಾ ಮಾಣಿಪ್ಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಹಸಂಚಾಲಕಿ ಡಾ. ರೆಶ್ಮಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಅಧ್ಯಕ್ಷ ಡಾ. ಮೊಹಮ್ಮದ್ ಸುಹೈಲ್ ವಂದಿಸಿದರು. ಉಪನ್ಯಾಸಕ ನಿಸ್ಚಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


