4 ಚಿನ್ನದ ಪದಕ, 2 ಚಿನ್ನದ ಟ್ರೋಫಿ ಗೆದ್ದು ಮಿಂಚಿದ ಮಂಗಳೂರಿನ ಪ್ರತಿಭೆ
ಮಂಗಳೂರು/ಮುಂಬೈ: ಮುಂಬೈನಲ್ಲಿ ಜುಲೈ 30ರಿಂದ ಆಗಸ್ಟ್ 2ರವರೆಗೆ ನಡೆದ ಮುಂಬೈ ಮೇಯರ್ ಕಪ್ ನ್ಯಾಷನಲ್ ಫೀಲ್ಡ್ ಇಂಡೋರ್ ಆರ್ಚರಿ ಚಾಂಪಿಯನ್‌ಶಿಪ್ 2026ರಲ್ಲಿ ಮಂಗಳೂರಿನ ಮೂಲದ 13 ವರ್ಷದ ಆರ್ಚರಿ ಪ್ರತಿಭೆ ಆದ್ಯಾ ದೇವಾಡಿಗ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.


ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಆಯೋಜಿಸಿದ್ದ ಈ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನ್ನು ಸಬರ್ಬನ್ ಮುಂಬೈ ಆರ್ಚರಿ ವೆಲ್‌ಫೇರ್ ಅಸೋಸಿಯೇಷನ್ ನಡೆಸಿದ್ದು, ಫೀಲ್ಡ್ ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ ತಾಂತ್ರಿಕ ಸಹಕಾರ ನೀಡಿತ್ತು.
4 ಚಿನ್ನದ ಪದಕ, 2 ಚಿನ್ನದ ಟ್ರೋಫಿ
ಅಂಡರ್-14 ಬಾಲಕಿಯರ ಫ್ರೀಸ್ಟೈಲ್ ಕಂಪೌಂಡ್ ಬೋ ವಿಭಾಗದಲ್ಲಿ ಆದ್ಯಾ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಚಿನ್ನದ ಟ್ರೋಫಿ ಗೆದ್ದರು. ಇದೇ ವಿಭಾಗದ ತಂಡ ಸ್ಪರ್ಧೆಯಲ್ಲೂ ಚಿನ್ನದ ಪದಕ ತಮ್ಮದಾಗಿಸಿಕೊಂಡರು.


ಇದಲ್ಲದೆ ಮುಂಬೈ ಮೇಯರ್ ಕಪ್ ಫೀಲ್ಡ್ ಇಂಡೋರ್ ಕ್ಲಬ್ ಚಾಂಪಿಯನ್‌ಶಿಪ್ 2026ರಲ್ಲಿ ಅಂಡರ್-14 ಬಾಲಕಿಯರ ಫ್ರೀಸ್ಟೈಲ್ ಕಂಪೌಂಡ್ ಬೋ ವಿಭಾಗ ಹಾಗೂ ಅಂಡರ್-17 ಬಾಲಕಿಯರ ಫ್ರೀಸ್ಟೈಲ್ ಕಂಪೌಂಡ್ ಬೋ ವಿಭಾಗದಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದರು. ತಂಡದೊಂದಿಗೆ ಮತ್ತೊಂದು ಚಿನ್ನದ ಟ್ರೋಫಿಯನ್ನೂ ಮುಡಿಗೇರಿಸಿಕೊಂಡರು.
ಒಟ್ಟಾರೆ ಆದ್ಯಾ 4 ಚಿನ್ನದ ಪದಕ ಹಾಗೂ 2 ಚಿನ್ನದ ಟ್ರೋಫಿ ಗೆದ್ದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.


ಸತತ ನಾಲ್ಕನೇ ರಾಷ್ಟ್ರೀಯ ಚಾಂಪಿಯನ್‌ಶಿಪ್
ಮಂಗಳೂರಿನಲ್ಲಿ ಜನಿಸಿ ಸದ್ಯ ಮುಂಬೈನಲ್ಲಿ ನೆಲೆಸಿರುವ ಆದ್ಯಾ, ಕ್ಷಮಾ ಸುಮನ್ ದೇವಾಡಿಗ ಹಾಗೂ ಸುಮನ್ ದೇವಾಡಿಗ ಕಣ್ವತೀರ್ಥ ದಂಪತಿಯ ಪುತ್ರಿ. ಮುಂಬೈನ ಬಾಂಬೆ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕೇವಲ 13ನೇ ವಯಸ್ಸಿನಲ್ಲೇ ಒಂದು ವರ್ಷದ ಅವಧಿಯಲ್ಲಿ ಇದು ಆದ್ಯಾ ಭಾಗವಹಿಸಿದ ನಾಲ್ಕನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ ಆಗಿದೆ. ಸತತ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅವರು ತಮ್ಮ ಪ್ರತಿಭೆ ಹಾಗೂ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದಾರೆ.
ಆದ್ಯಾ ಅವರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ಕ್ರೀಡಾ ಬದ್ಧತೆ ಕುಟುಂಬದವರಿಗೆ ಹಾಗು ಶಾಲೆಗೆ ಹೆಮ್ಮೆ ತಂದಿದೆ.

