ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪಂಪ್ವೆಲ್ ಬಂದ್ ಯಶಸ್ವಿಯಾಗಿ ನೆರವೇರಿದೆ.
ನಗರದ ಪಂಪ್ ವೆಲ್ ವೃತ್ತದ ಬಳಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ವಿಜಯ್ ಕುಮಾರ್ ಶೆಟ್ಟಿ ರಾಜ್ಯಸರಕಾರವು ಆದಷ್ಟು ಬೇಗ ಈ ಯೋಜನೆಯನ್ನು ಕೈಬಿಡಲಿ ಎಂದು ಒತ್ತಾಯಿಸಿದರು. ಈ ಯೋಜನೆಯ ನಿಲ್ಲಿಸುವಂತೆ ಮುಖ್ಯಮಂತ್ರಿಯ ಜೊತೆಗೆ ಹಲವು ಬಾರಿ ತಿಳಿಸಿದ್ದೇವೆ ಆದರೆ ಅವರು ನಮ್ಮ ಮಾತಿಗೆ ಬೆಲೆ ನೀಡಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ನೇತ್ರಾವತಿ ಉಳಿಸಿ ಎಂಬ ಘೋಷಣೆ ಎಲ್ಲ ಕಡೆಯಲ್ಲಿ ಕೇಳಿಬರುತ್ತಿದ್ದು, `ಸುದೆ ಮಾರುನ ಮಾರಿಲು'(ನದಿಯನ್ನು ಮಾರಾಟ ಮಾಡುವ ಮಾರಿಗಳು) ಎಂಬ ಘೋಷಣೆಗಳನ್ನು ಒತ್ತಿ ಒತ್ತಿ ಕೂಗುವ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೊಳ್ಳ, ನೇತ್ರಾವತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ.ನಿರಂಜನ್ ರೈ, ಕೇಮಾರು ಸಾಂದೀಪನಿ ಮಠದ ಈಶವಿಠಲ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಾಗೂ ಮುಸ್ಲಿಂ ಮತ್ತು ಕ್ರೈಸ್ಥ ಧರ್ಮಗುರುಗಳು ಮತ್ತಿತರರು ಉಪಸ್ಥಿತರಿದ್ದರು.






















