ನವದೆಹಲಿ: ಉತ್ತರ ಪ್ರದೇಶದ ದಾದಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಸುಮ್ಮನಿದ್ದು ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿದ್ದ ಪ್ರಧಾನಮಂತ್ರಿ ಮೋದಿ ಕೊನೆಗೂ ಮೌನವನ್ನು ಮುರಿದು, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದ ಸುಳ್ಳು ವದಂತಿಯಿಂದ ಮುಸ್ಲಿಂ ವ್ಯಕ್ತಿಯ ಹತ್ಯೆ ಪ್ರಕರಣ ಹಾಗೂ ಪಾಕ್ ಗಾಯಕ ಗುಲಾಂ ಆಲಿ ಕಾರ್ಯಕ್ರಮ ರದ್ದಾಗಿರುವುದು ದುರದೃಷ್ಟಕರ. ಇಂತಹ ಕೃತ್ಯಗಳಿಗೆ ಬಿಜೆಪಿ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಆಂಗ್ಲಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಂತಹ ಘಟನೆಗಳು ಹಿಂದೆಯೂ ನಡೆದಿದ್ದವು, ಬಿಜೆಪಿ ಸುಳ್ಳು ಜಾತ್ಯಾತೀತವಾದವನ್ನು ವಿರೋಧಿಸುತ್ತದೆ. ವಿರೋಧ ಪಕ್ಷಗಳು ಇಂತಹ ಘಟನೆಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ, ಮಾತುಕತೆಯಿಂದ ಇಂತಹ ಘಟನೆಗಳಿಗೆ ಅಂತ್ಯ ಹಾಡಬಹುದು ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.


