ಕಾಸರಗೋಡು, ಜು.27: ರಾಮಕ್ಷತ್ರಿಯ ಸಮಾಜದ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ದಾಖಲೆಗಳನ್ನು ಒಳಗೊಂಡಿರುವ ಸಂಪಾದಿತ ಕೃತಿ ಬಿನ್ನವತ್ತಳೆಯನ್ನು ಪುನರ್‌ಮುದ್ರಿಸಲು ಹಾಗೂ ‘ರಾಮಕ್ಷತ್ರಿಯ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸ ಡೈರೆಕ್ಟರಿ–2026’ ಪ್ರಕಟಿಸಲು ಸುಮಾರು ₹10 ಲಕ್ಷ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

1997ರ ನವೆಂಬರ್ 9ರಂದು ಶಿವರಾಮ ಕಾಸರಗೋಡು ಅವರ ಸಂಪಾದಕತ್ವದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ‘ಬಿನ್ನವತ್ತಳೆ’ ಕೃತಿಯಲ್ಲಿ ಸರ್ಕಾರದ ದಾಖಲೆಗಳು, ಸಂಶೋಧನಾ ಲೇಖನಗಳು, ರಾಮಕ್ಷತ್ರಿಯ ಸಮುದಾಯದ ಜನಾಂಗೀಯ ಅಧ್ಯಯನ, ಸಾಹಿತ್ಯ ಹಾಗೂ 1997ರವರೆಗೆ ಪ್ರಕಟಗೊಂಡ ವಿವಿಧ ಕೃತಿಗಳ ಆಯ್ದ ಬರಹಗಳನ್ನು ಸಂಗ್ರಹಿಸಲಾಗಿದೆ. ಇದೀಗ ಈ ಕೃತಿಯನ್ನು ಪರಿಷ್ಕೃತ ರೂಪದಲ್ಲಿ ಪುನರ್‌ಮುದ್ರಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ರಾಮಕ್ಷತ್ರಿಯ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸ ಡೈರೆಕ್ಟರಿ–2026 ನಾಲ್ಕನೇ ಆವೃತ್ತಿಯಾಗಿ ಪ್ರಕಟವಾಗಲಿದೆ. ಈ ಡೈರೆಕ್ಟರಿಯ ಮೊದಲ ಮೂರು ಆವೃತ್ತಿಗಳು 1997, 1998 ಹಾಗೂ 2004ರಲ್ಲಿ ಪ್ರಕಟಗೊಂಡಿದ್ದವು.
ಪ್ರಕಟಣಾ ವೆಚ್ಚಕ್ಕಾಗಿ ದುಬೈ, ಶಾರ್ಜಾ, ಕುವೈತ್, ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಸಮಾಜಸೇವಾ ಸಂಘಟನೆಗಳು, ದಾನಿಗಳು, ಉದ್ಯಮಿಗಳು ಮತ್ತು ಸಮಾಜಬಂಧುಗಳ ಸಹಕಾರದೊಂದಿಗೆ ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ಧನಸಂಗ್ರಹ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಈ ಎರಡೂ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕ ನಿಗದಿಪಡಿಸಲು ವಿವಿಧ ಪ್ರದೇಶಗಳಲ್ಲಿ ದುಂಡುಮೇಜಿನ ಪರಿಷತ್ ಸಭೆಗಳನ್ನು ಆಯೋಜಿಸುವ ಯೋಜನೆಯಿದೆ ಎಂದು ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಪ್ರಕಟಣಾ ಯೋಜನೆಯಿಂದ ಉಳಿಕೆಯಾಗುವ ಹಣವನ್ನು ‘ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ’ ಸ್ಥಾಪನೆಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ. ಮ್ಯೂಸಿಯಂನಲ್ಲಿ ರಾಮಕ್ಷತ್ರಿಯ ಸಮಾಜದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸ್ಮರಣ ಸಂಚಿಕೆಗಳು, ಅಪರೂಪದ ದಾಖಲೆಗಳು, ಪ್ರಕಟಿತ ಕೃತಿಗಳು ಹಾಗೂ ಹಳೆಯ ತಲೆಮಾರಿನವರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ.




ಸಮಾಜದ ಸಮಗ್ರ ಅಭಿವೃದ್ಧಿಗೆ ಕುಟುಂಬ ದೇವಸ್ಥಾನಗಳು ಹಾಗೂ ಕುಲದೇವರ ಆರಾಧನಾ ಕೇಂದ್ರಗಳ ಪುನರುಜ್ಜೀವನ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ಶಿವರಾಮ ಕಾಸರಗೋಡು, ಸಮಾಜದ ಸಂಘಟನೆಗಳ ನಡುವೆ ಸಮನ್ವಯ ಹಾಗೂ ಸಂಪರ್ಕ ವೃದ್ಧಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ, ಅಂತರರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಟುಂಬ ದೇವಸ್ಥಾನಗಳು, ಕುಲದೇವರ ಮನೆಗಳು ಮತ್ತು ಸಂಘಟನೆಗಳ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಡೈರೆಕ್ಟರಿಯಲ್ಲಿ ದೇವಸ್ಥಾನಗಳ ಹೆಸರು, ವಿಳಾಸ, ಪದಾಧಿಕಾರಿಗಳ ಮೊಬೈಲ್ ಸಂಖ್ಯೆ, ಮೊಕ್ತೇಸರರು, ಧರ್ಮದರ್ಶಿಗಳು, ಆಡಳಿತಗಾರರು ಹಾಗೂ ಪ್ರಮುಖ ಸಂಪರ್ಕ ವಿವರಗಳನ್ನು ದಾಖಲಿಸಲಾಗುವುದು. ಸಮಸ್ತ ರಾಮಕ್ಷತ್ರಿಯ ಸಮಾಜದವರು ಅಗತ್ಯ ಮಾಹಿತಿಯನ್ನು ಒದಗಿಸಿ ಹಾಗೂ ಈ ಮಾಹಿತಿಯನ್ನು ವಾಟ್ಸಪ್ ಮೂಲಕ ಹಂಚುವ ಮೂಲಕ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಸಂಪರ್ಕ:
ಶಿವರಾಮ ಕಾಸರಗೋಡು,
ಅಧ್ಯಕ್ಷರು, ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),
ಕನ್ನಡ ಗ್ರಾಮ, ಪಾರೆಕಟ್ಟೆ, ಕಾಸರಗೋಡು – 671121.
ಮೊಬೈಲ್: 9448572016.
ಯೋಜನೆಗೆ ಆರ್ಥಿಕ ಸಹಾಯ ನೀಡಲು ಇಚ್ಛಿಸುವವರು ಗೂಗಲ್ ಪೇ ಮೂಲಕ 9448572016 ಸಂಖ್ಯೆಗೆ ಧನಸಹಾಯ ಕಳುಹಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.


