ಮಂಗಳೂರು: ಶಾಲೆಯಲ್ಲಿ ಎಲ್‌ಕೆಜಿ ವಿದ್ಯಾರ್ಥಿನಿಗೆ ದೈಹಿಕ ಶಿಕ್ಷೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಈ ಹಂತದಲ್ಲಿ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿರುವುದು ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವದ ಸಂದೇಶವೆಂದು ಪರಿಗಣಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಸುರತ್ಕಲ್‌ನ ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ತರಗತಿ ವೇಳೆ ಶಿಕ್ಷಕಿ ಆಶಾ ಕಾಸ್ತ ಅವರು ಕೋಲಿನಿಂದ ಹೊಡೆದಿದ್ದಾರೆ ಎಂದು ಮಗುವಿನ ತಾಯಿ ಪ್ರತೀನಾ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು ಮಧ್ಯಸ್ಥಿಕೆ ವಹಿಸಿ ವಿಷಯವನ್ನು ಬಗೆಹರಿಸಿರುವುದಾಗಿ ಹೇಳಲಾಗಿದ್ದರೂ, ಬಳಿಕ ಮತ್ತೆ ಮಗುವಿಗೆ ದೈಹಿಕ ಶಿಕ್ಷೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಾಯಿ ಶಫ್ರೀನಾ ದೂರು ಸಲ್ಲಿಸಿದ್ದರು.
ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಬಳಿಕ ಮಂಗಳೂರು 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಿಕ್ಷಕಿ ಆಶಾ ಕ್ರಾಸ್ತಾ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹಂತದಲ್ಲಿ ಪ್ರಕರಣವನ್ನು ಕೈಬಿಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಲೆ ಎಂಬುದು ಮಕ್ಕಳ ಜ್ಞಾನ, ವ್ಯಕ್ತಿತ್ವ ಮತ್ತು ಸಂಸ್ಕಾರ ರೂಪುಗೊಳ್ಳುವ ಪವಿತ್ರ ತಾಣ. ಅಂತಹ ಸ್ಥಳದಲ್ಲಿ ಭಯ, ಹಿಂಸೆ ಅಥವಾ ದೈಹಿಕ ಶಿಕ್ಷೆಗೆ ಯಾವುದೇ ಸ್ಥಾನವಿಲ್ಲ. ಮಕ್ಕಳಿಗೆ ಹೊಡೆಯುವ ಮೂಲಕ ಶಿಸ್ತು ಕಲಿಸುವ ವಿಧಾನವನ್ನು ಕಾನೂನು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆ ಎರಡೂ ತಿರಸ್ಕರಿಸುತ್ತವೆ.
ಭಾರತದ ಸಂವಿಧಾನದ ಪರಿಚ್ಛೇದ 21 ಪ್ರತಿಯೊಬ್ಬ ಮಗುವಿಗೂ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಪರಿಚ್ಛೇದ 21ಎ ಶಿಕ್ಷಣದ ಹಕ್ಕನ್ನು ನೀಡುವುದರ ಜೊತೆಗೆ ಸುರಕ್ಷಿತ ಮತ್ತು ಗೌರವಯುತ ಶಿಕ್ಷಣ ವಾತಾವರಣವನ್ನು ಒತ್ತಿಹೇಳುತ್ತದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009ರ ಕಲಂ 17 ಶಾಲೆಗಳಲ್ಲಿ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳವನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಜೊತೆಗೆ ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮಾರ್ಗಸೂಚಿಗಳೂ ಮಕ್ಕಳ ಮೇಲಿನ ಯಾವುದೇ ರೀತಿಯ ಹಿಂಸೆಯನ್ನು ಅನುಮತಿಸುವುದಿಲ್ಲ.
ಶಿಕ್ಷಕರು ಮಕ್ಕಳನ್ನು ಪ್ರೀತಿ, ಸಹಾನುಭೂತಿ ಮತ್ತು ಮನೋವೈಜ್ಞಾನಿಕ ಅರಿವಿನ ಮೂಲಕ ಮಾರ್ಗದರ್ಶನ ಮಾಡಬೇಕೇ ಹೊರತು, ದೈಹಿಕ ಶಿಕ್ಷೆಯ ಮೂಲಕ ಅಲ್ಲ. ಇಂತಹ ಶಿಕ್ಷೆಗಳು ಮಕ್ಕಳಲ್ಲಿ ಭಯ, ಆತಂಕ, ಆತ್ಮವಿಶ್ವಾಸದ ಕೊರತೆ ಹಾಗೂ ಶಾಲೆಯ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಉಂಟುಮಾಡುವ ಸಾಧ್ಯತೆ ಇದೆ.
ಹೈಕೋರ್ಟ್‌ನ ಈ ಅಭಿಪ್ರಾಯವು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾಗದೆ, ರಾಜ್ಯದ ಎಲ್ಲಾ ಶಿಕ್ಷಣ ಸಂದೇಶವಾಗಿದೆ ಸಂಸ್ಥೆಗಳಿಗೆ ಎಚ್ಚರಿಕೆಯ . ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಸುರಕ್ಷತೆ, ಹಕ್ಕುಗಳು ಮತ್ತು ಕಾನೂನುಬದ್ಧ ಜವಾಬ್ದಾರಿಗಳ ಕುರಿತು ಶಿಕ್ಷಕರಿಗೆ ನಿರಂತರ ತರಬೇತಿ ನೀಡುವುದು ಹಾಗೂ ಪ್ರತಿಯೊಂದು ಶಾಲೆಯಲ್ಲೂ ಪರಿಣಾಮಕಾರಿ ಮಕ್ಕಳ ಸುರಕ್ಷತಾ ನೀತಿ ಮತ್ತು ದೂರು ನಿವಾರಣಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ.
ಮಕ್ಕಳಿಗೆ ಹೊಡೆದು ಶಿಕ್ಷಣ ನೀಡುವ ಕಾಲ ಮುಗಿದಿದೆ. ಸಂವಿಧಾನ, ಕಾನೂನು ಮತ್ತು ಮಾನವೀಯ ಮೌಲ್ಯಗಳು ಹೇಳುವುದು ಒಂದೇ—ಮಕ್ಕಳಿಗೆ ಭಯವಲ್ಲ, ಪ್ರೀತಿ, ಗೌರವ ಮತ್ತು ಸುರಕ್ಷಿತ ವಾತಾವರಣದ ಮೂಲಕ ಶಿಕ್ಷಣ ನೀಡಬೇಕು.

